ಟ್ರಂಪ್ ತಲೆ ತಂದವರಿಗೆ 575 ಕೋಟಿ ರೂಪಾಯಿ: ಇರಾನ್ ಘೋಷಣೆ

Update: 2020-01-06 13:52 GMT

ಟೆಹರಾನ್ (ಇರಾನ್), ಜ. 6: ಕಳೆದ ವಾರ ಇರಾನ್ ಸೇನಾಧಿಕಾರಿ ಜನರಲ್ ಕಾಸಿಮ್ ಸುಲೈಮಾನಿ ಸಾವಿಗೆ ಕಾರಣವಾದ ವಾಯು ದಾಳಿಯನ್ನು ನಡೆಸುವಂತೆ ಆದೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಲೆ ತಂದವರಿಗೆ 80 ಮಿಲಿಯ ಡಾಲರ್ (ಸುಮಾರು 575 ಕೋಟಿ ರೂಪಾಯಿ) ಬಹುಮಾನವನ್ನು ಇರಾನ್ ಘೋಷಿಸಿದೆ.

ರವಿವಾರ ನಡೆದ ಸುಲೈಮಾನಿಯವರ ಅಂತ್ಯಸಂಸ್ಕಾರದ ವೇಳೆ, ಸರಕಾರಿ ಸುದ್ದಿ ಚಾನೆಲ್‌ಗಳಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. ಟ್ರಂಪ್‌ರನ್ನು ಕೊಲ್ಲುವುದಕ್ಕಾಗಿ ಪ್ರತಿಯೊಬ್ಬ ಇರಾನ್ ಪ್ರಜೆಗೆ ಒಂದು ಡಾಲರ್‌ನಂತೆ (ಸುಮಾರು 72 ರೂಪಾಯಿ) ಮೊತ್ತವನ್ನು ತೆಗೆದಿಡಲಾಗುವುದು ಹಾಗೂ ಅಮೆರಿಕ ಅಧ್ಯಕ್ಷರನ್ನು ಕೊಂದವರಿಗೆ ಈ ಹಣವನ್ನು ನೀಡಲಾಗುವುದು ಎಂಬುದಾಗಿ ಘೋಷಿಸಲಾಗಿದೆ ಎಂದು ಮಿರರ್.ಕೊ.ಯುಕೆ ವರದಿಯೊಂದರಲ್ಲಿ ತಿಳಿಸಿದೆ.

‘‘ಇರಾನ್‌ನಲ್ಲಿ 80 ಮಿಲಿಯ (8 ಕೋಟಿ) ನಿವಾಸಿಗಳಿದ್ದಾರೆ. ಇರಾನ್ ಜನಸಂಖ್ಯೆಯ ಆಧಾರದಲ್ಲಿ ನಾವು 80 ಮಿಲಿಯ ಡಾಲರ್ ಹಣವನ್ನು ತೆಗೆದಿಡುತ್ತೇವೆ. ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಕೊಂದವರಿಗೆ ಕೊಡುತ್ತೇವೆ’’ ಎಂಬುದಾಗಿ ಘೋಷಿಸಲಾಗಿದೆ.

ಜನವರಿ 3ರಂದು ಇರಾಕ್ ರಾಜಧಾನಿ ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸೇನಾ ವಾಹನಗಳ ಸಾಲಿನ ಮೇಲೆ ಅಮೆರಿಕದ ಡ್ರೋನ್‌ಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲೂಶನ್ ಗಾರ್ಡ್ಸ್ ಕಾರ್ಪ್ಸ್‌ಗೆ ಸೇರಿದ ಖುದ್ಸ್ ಫೋರ್ಸ್‌ನ ಮುಖ್ಯಸ್ಥ ಸುಲೈಮಾನಿ ಸೇರಿದಂತೆ ಇರಾನ್ ಮತ್ತು ಇರಾಕ್‌ನ ಹಲವು ಸೇನಾಧಿಕಾರಿಗಳು ಸಾವಿಗೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News