ಯುಎಇ: ಭಾರತೀಯ ಮಹಿಳೆ, ಪುತ್ರಿಗೆ ಇರಿದ ವ್ಯಕ್ತಿಗೆ 10 ವರ್ಷ ಜೈಲು

Update: 2020-01-06 14:03 GMT

ಶಾರ್ಜಾ (ಯುಎಇ), ಜ. 6: ಕಟ್ಟಡವೊಂದರ ಲಿಫ್ಟ್‌ ನಲ್ಲಿ ಓರ್ವ ಭಾರತೀಯ ಮಹಿಳೆ ಮತ್ತು ಅವರ ಏಳು ವರ್ಷದ ಮಗಳಿಗೆ ಹಲವು ಬಾರಿ ಚೂರಿಯಿಂದ ಇರಿದ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕೊಲೆಗೈದ ವ್ಯಕ್ತಿಯೊಬ್ಬನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿನ ಕ್ರಿಮಿನಲ್ ನ್ಯಾಯಾಲಯವೊಂದು ರವಿವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸುಡಾನ್‌ನ 43 ವರ್ಷದ ವ್ಯಕ್ತಿಯು ಕೊಲೆಗಾಗಿ ಏಳು ವರ್ಷ ಜೈಲಲ್ಲಿ ಕಳೆಯುತ್ತಾನೆ ಹಾಗೂ ಮಹಿಳೆ ಮತ್ತು ಮಗುವನ್ನು ಇರಿದಿರುವುದಕ್ಕಾಗಿ ಮೂರು ವರ್ಷ ಜೈಲಲ್ಲಿ ಇರುತ್ತಾನೆ ಎಂದು ತೀರ್ಪು ಹೇಳಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ. ಅವನ ಜೈಲು ಶಿಕ್ಷೆ ಪೂರ್ತಿಯಾದ ಬಳಿಕ ಗಡಿಪಾರು ಮಾಡಲಾಗುವುದು.

ಈ ಘಟನೆಯು 2019 ಜನವರಿ 16ರಂದು ನಡೆದಿದೆ. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಪೊಲೀಸ್ ತಂಡವೊಂದು, ಮಹಿಳೆ ಮತ್ತು ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮತ್ತು ಸುಡಾನಿ ವ್ಯಕ್ತಿ ಸಾವಿಗೀಡಾಗಿರುವುದನ್ನು ನೋಡಿತು.

ಹಂತಕನೂ ಚೂರಿಯನ್ನು ಝಳಪಿಸುತ್ತಾ ಸ್ಥಳದಲ್ಲೇ ಇದ್ದನು. ಬಳಿಕ ಅವನು ಪೊಲೀಸರಿಗೆ ಶರಣಾದನು.

‘ಕೌಟುಂಬಿಕ ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ’ ನಾನು ದಾಳಿ ನಡೆಸಿದ್ದೇನೆ ಎಂಬುದಾಗಿ ಅವನು ಪೊಲೀಸರಿಗೆ ವಿವರಣೆ ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News