ಉಡುಪಿ: ಮಾರಾಟಕ್ಕೆ ಯತ್ನಿಸಿದ ಮಕ್ಕಳ ರಕ್ಷಣೆ
ಉಡುಪಿ, ಜ. 6: ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಮಕ್ಕಳನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ನೀರೆ ಗ್ರಾಪಂ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಇಂದು ನೀರೆ ಗ್ರಾಮ ಎಂಬಲ್ಲಿ ನಡೆದಿದೆ.
ನೀರೆ ಗ್ರಾಮದ ಆನಂದ ಎಂಬವರಿಗೆ ನಾಲ್ಕು ವರ್ಷದ ಗಂಡು ಮಗು ಹಾಗೂ ಮೂರು ವರ್ಷದ ಹೆಣ್ಣು ಮಗು ಇದ್ದು, ಅವರ ಪತ್ನಿ ಮಕ್ಕಳನ್ನು ಬಿಟ್ಟು ಹೋಗಿ ವರ್ಷಗಳೇ ಕಳೆದಿವೆ. ಈ ಮಕ್ಕಳ ಪಾಲನೆ ಹಾಗೂ ಪೋಷಣೆ ಮಾಡಲು ಸಾಧ್ಯವಾಗದ ಆನಂದ, ಅವರಿಬ್ಬರನ್ನು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರೆನ್ನಲಾಗಿದೆ.
ಈ ವಿಚಾರ ಅರಿತ ನೀರೆ ಗ್ರಾಮ ಪಂಚಾಯತ್‌ನವರು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದು, ಅದರಂತೆ ಕಾರ್ಯಾಚರಣೆ ನಡೆಸಿದ ಘಟಕವು ಇಬ್ಬರು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಲಾಗಿದೆ. ಸಮಿತಿಯ ಮೌಖಿಕ ಆದೇಶದಂತೆ ಈ ಮಕ್ಕಳನ್ನು ಸಂತೆಕಟ್ಟೆಯಲ್ಲಿರುವ ಶ್ರೀಕೃಷ್ಣಾನುಗ್ರಹ ಶಿಶು ಪಾಲನಾ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾ ಅಧಿಕಾರಿ ಸದಾನಂದ ನಾಯಕ್, ಕಾನೂನ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ನೀರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್, ಸದಸ್ಯರಾದ ಹೈದರ್ ಅಲಿ, ಪ್ರೇಮಾವತಿ ನಾಯಕ, ಗ್ರಾಮ ಲೆಕ್ಕಾಧಿಕಾರಿ ವಸಂತ ಪೂಜಾರಿ, ಗಣೇಶ್, ಸಾಹಿಲ್ ಶೆಟ್ಟಿ, ಸುನಂದ ಪಾಲ್ಗೊಂಡಿದ್ದರು.