ಕಾಡ್ಗಿಚ್ಚು ಪೀಡಿತ ಪ್ರದೇಶಗಳ ಪುನರ್ನಿರ್ಮಾಣಕ್ಕೆ 10,000 ಕೋಟಿ ರೂ: ಆಸ್ಟ್ರೇಲಿಯ ಸರಕಾರ ಘೋಷಣೆ

Update: 2020-01-06 14:50 GMT
File photo

ಸಿಡ್ನಿ, ಜ. 6: ತಿಂಗಳುಗಳ ಅವಧಿಯ ಕಾಡ್ಗಿಚ್ಚಿನಿಂದ ಬೆಂದು ಹೋಗಿರುವ ಆಸ್ಟ್ರೇಲಿಯದ ಮೂರು ರಾಜ್ಯಗಳ ಐದು ವಲಯಗಳ ಪುನರ್ನಿರ್ಮಾಣಕ್ಕಾಗಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 1.4 ಬಿಲಿಯ ಅಮೆರಿಕನ್ ಡಾಲರ್ (ಸುಮಾರು 10,000 ಕೋಟಿ ರೂಪಾಯಿ) ಒದಗಿಸುವುದಾಗಿ ಆಸ್ಟ್ರೇಲಿಯ ಸರಕಾರ ಘೋಷಿಸಿದೆ.

ವಿನಾಶಕಾರಿ ಕಾಡಿನ ಬೆಂಕಿಯು ಇಡೀ ಗ್ರಾಮಗಳನ್ನು ಸುಟ್ಟು ಹಾಕಿದೆ, ಹಸಿರು ಪ್ರದೇಶಗಳನ್ನು ಕಪ್ಪು ಮಾಡಿದೆ ಹಾಗೂ ಸುಮಾರು ಐರ್‌ಲ್ಯಾಂಡ್ ದ್ವೀಪದ ಗಾತ್ರದ ಪ್ರದೇಶವನ್ನು ನಾಶಗೊಳಿಸಿದೆ ಎಂದು ಅಧಿಕೃತ ಅಂಕಿಅಂಶಗಳು ಹೇಳಿವೆ.

ಕಾಡ್ಗಿಚ್ಚು ಇನ್ನೂ ವಾರಗಳು ಅಥವಾ ತಿಂಗಳುಗಳ ಮೊದಲು ನಂದಿ ಹೋಗುವ ಲಕ್ಷಣವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 ರಾಷ್ಟ್ರೀಯ ವಿಪತ್ತು ನಿಧಿಗೆ 1.4 ಬಿಲಿಯ ಅಮೆರಿಕನ್ ಡಾಲರ್ ಹಣವನ್ನು ಒದಗಿಸುವುದಾಗಿ ಪ್ರಧಾನಿ ಸ್ಕಾಟ್ ಮೊರಿಸನ್ ಘೋಷಿಸಿದ್ದಾರೆ. ಈ ಬೃಹತ್ ವಿಪತ್ತಿಗೆ ತೋರಿಸಿದ ನಿಧಾನ ಸ್ಪಂದನೆಗಾಗಿ ಪ್ರಧಾನಿ ಸ್ಕಾಟ್ ಮೊರಿಸನ್ ಮತ್ತು ಅವರ ಸರಕಾರ ಭಾರೀ ಟೀಕೆಗೆ ಒಳಗಾಗಿದೆ.

ಆಸ್ಟ್ರೇಲಿಯದತ್ತ ಧಾವಿಸಿ ಬರುತ್ತಿರುವ ಚಂಡಮಾರುತ

ಭೀಕರ ಕಾಡ್ಗಿಚ್ಚಿನ ಬೇಗೆಯಿಂದ ಬೇಯುತ್ತಿರುವ ನಡುವೆಯೇ, ಆಸ್ಟ್ರೇಲಿಯದತ್ತ ಇನ್ನೊಂದು ವಿಪತ್ತು ಧಾವಿಸಿ ಬರುತ್ತಿದೆ. ದೇಶದ ವಾಯುವ್ಯ ಕರಾವಳಿಯ ಸಮುದ್ರದಲ್ಲಿ ಸೋಮವಾರ ಚಂಡಮಾರುತವೊಂದು ರೂಪುಗೊಂಡಿದ್ದು, ಗಂಟೆಗೆ 125 ಕಿ.ಮೀ. ವೇಗದ ಗಾಳಿಯು ಬ್ರೂಮ್ ಪಟ್ಟಣಕ್ಕೆ ಅಪ್ಪಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತವು ಮಂಗಳವಾರ ಬೆಳಗ್ಗೆ 14,000 ಜನಸಂಖ್ಯೆಯ ಪಟ್ಟಣಕ್ಕೆ ಅಪ್ಪಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಚಂಡಮಾರುತವು ಭಾರೀ ಮಳೆಗೂ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೇಶದ ಇತರ ಭಾಗಗಳಲ್ಲಿರುವ ಕಾಡ್ಗಿಚ್ಚಿನ ಮೇಲೆ ಈ ಚಂಡಮಾರುತವು ಯಾವುದೇ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News