×
Ad

ಮುಸ್ಲಿಂ ಸೆಂಟ್ರಲ್ ಕಮಿಟಿಯ ‘ಅಸಹಕಾರ ಚಳವಳಿ’ ಮಂಗಳೂರಿನಿಂದ ಸ್ಥಳಾಂತರ

Update: 2020-01-06 20:23 IST

ಮಂಗಳೂರು, ಜ.6: ಕೇಂದ್ರ ಸರಕಾರದ ವಿವಾದಾತ್ಮಕ ಸಿಎಎ, ಎನ್‌ಆರ್‌ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸಲು ನಗರದ ನೆಹರೂ ಮೈದಾನದಲ್ಲಿ ‘ಅಸಹಕಾರ ಚಳವಳಿ’ಯ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನ ಪ್ರತಿಭಟನೆಯನ್ನು ಮಂಗಳೂರಿನಿಂದ ಅಡ್ಯಾರ್-ಕಣ್ಣೂರಿಗೆ ಸ್ಥಳಾಂತರಿಸಿದೆ.

ಜ.4ರಂದು ನಗರದ ನೆಹರೂ ಮೈದಾನದಲ್ಲಿ ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ದ.ಕ. ಜಿಲ್ಲೆಯ 28 ಸಂಘಟನೆಗಳ ಸಹಯೋಗದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಈ ಹಿಂದೆ ಪ್ರಕಟಿಸಿತ್ತು. ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿಭಟನೆ ಮುಂದೂಡಲು ಸೂಚಿಸಿದ್ದರು. ಈ ನಡುವೆ, ಹಲವು ಕಾರಣಗಳನ್ನು ಮುಂದಿರಿಸಿ ಮಂಗಳೂರು ಪೊಲೀಸ್ ಆಯುಕ್ತರೂ ಪ್ರತಿಭಟನೆ ನಡೆಯಲು ಅನುಮತಿ ನೀಡಿರಲಿಲ್ಲ. ಬಳಿಕ ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿತ್ತು.

ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನ ಉದ್ದೇಶಿತ ಪ್ರತಿಭಟನೆಯನ್ನು ಮಂಗಳೂರಿನಿಂದ ಸ್ಥಳಾಂತರಿಸಿ ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿ ಮುಂಭಾಗದ ಸುಮಾರು 15 ಎಕರೆ ವಿಶಾಲ ಪ್ರದೇಶದಲ್ಲಿ ಆಯೋಜಿಸುವುದಾಗಿ ಬಹುತೇಕ ನಿರ್ಧರಿಸಿದೆ. ಅಲ್ಲದೆ, ಕಮಿಟಿಯ ನಾಯಕರು ಅಡ್ಯಾರ್ ಕಣ್ಣೂರ್ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪ್ರತಿಭಟನಾ ಸಮಾವೇಶ ಕಾರ್ಯಕ್ರಮದ ನಡುವೆಯೂ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಸಂಜೆಯ ‘ಅಸರ್‌‘ ಮತ್ತು ‘ಮಗ್ರಿಬ್’ ನಮಾಜ್‌ಗೆ ಸ್ಥಳೀಯ ಮೂರು ಮಸೀದಿಗಳಲ್ಲಿ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಮಂಗಳವಾರ (ಜ.7) ನಡೆಯಲಿರುವ ಕಮಿಟಿಯ ಸಭೆಯಲ್ಲಿ ಸಮಾವೇಶ ಆಯೋಜನೆಯ ದಿನಾಂಕವನ್ನು ನಿಗದಿಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಸ್ಲಿಂ ಸೆಂಟ್ರಲ್ ಕಮಿಟಿಯ ನಾಯಕರಾದ ಹಾಜಿ ಕೋಡಿಜಾಲ್ ಇಬ್ರಾಹೀಂ, ಬಿ.ಎಂ. ಮುಮ್ತಾಝ್ ಅಲಿ, ಎಸ್.ಎಂ. ರಶೀದ್ ಹಾಜಿ, ಹನೀಫ್ ಹಾಜಿ ಬಂದರ್, ಬಾಷ ತಂಙಳ್, ಸಲೀಂ ಸೂಫಿಖಾನ್ ಹಾಗೂ ಪೊಲೀಸ್ ಇಲಾಖೆಯ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ, ಇನ್‌ಸ್ಪೆಕ್ಟರ್ ಅಮಾನುಲ್ಲಾ ಸಹಿತ ಹಲವರು ಸ್ಥಳ ಪರಿಶೀಲಿಸಿದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ಪ್ರತಿಭಟನೆಯನ್ನು ಆಯೋಜಿಸಲು ಮಂಗಳೂರು ಪೊಲೀಸ್ ಆಯುಕ್ತರು ಅವಕಾಶ ನೀಡುತ್ತಿಲ್ಲ. ಪ್ರತಿಭಟನೆಯನ್ನು ಅಡ್ಯಾರ್-ಕಣ್ಣೂರಿಗೆ ಸ್ಥಳಾಂತರಿಸಿದ್ದು, ಮಂಗಳವಾರ ನಡೆಯಲಿರುವ ಸಭೆಯಲ್ಲಿ ದಿನಾಂಕ ನಿಗದಿಯಾಗಲಿದೆ.

- ಹನೀಫ್ ಹಾಜಿ ಬಂದರ್, ಪ್ರಧಾನ ಕಾರ್ಯದರ್ಶಿ, ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News