ಅಮೆರಿಕ ಸೇನೆ ಇರಾಕ್ ತೊರೆಯುವಂತೆ ಸಂಸತ್ತು ಒತ್ತಾಯ
ಬಗ್ದಾದ್ (ಇರಾಕ್), ಜ. 6: ಇರಾಕ್‌ನಲ್ಲಿರುವ ಅಮೆರಿಕದ ಸಾವಿರಾರು ಸೈನಿಕರು ವಾಪಸ್ ಹೋಗಬೇಕು ಎಂದು ಇರಾಕ್ ಸಂಸತ್ತು ರವಿವಾರ ಒತ್ತಾಯಿಸಿದೆ. ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಶುಕ್ರವಾರ ಅಮೆರಿಕದ ವಾಯುಪಡೆ ನಡೆಸಿದ ದಾಳಿಯಲ್ಲಿ ಇರಾನ್‌ನ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಮೃತಪಟ್ಟ ಬಳಿಕ ಇರಾಕ್ ಸಂಸತ್ತು ಈ ಬೇಡಿಕೆಯನ್ನು ಮುಂದಿಟ್ಟಿದೆ.
ಅಮೆರಿಕ ದಾಳಿಯ ಬಳಿಕ ಇರಾಕ್ ಮತ್ತು ಅಮೆರಿಕಗಳ ನಡುವಿನ ಸಂಬಂಧ ಹಳಸಿದೆ.
ಇದೇ ಹಿನ್ನೆಲೆಯಲ್ಲಿ ಕರೆಯಲಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಉಸ್ತುವಾರಿ ಪ್ರಧಾನಿ ಆದಿಲ್ ಅಬ್ದುಲ್ ಮಹದಿ ಭಾಗವಹಿಸಿದರು ಹಾಗೂ ಅಮೆರಿಕ ನಡೆಸಿದ ದಾಳಿಯು ‘ರಾಜಕೀಯ ಹತ್ಯೆ’ ಎಂಬುದಾಗಿ ಬಣ್ಣಿಸಿದರು.
ಇರಾಕ್ ಸಂಸತ್ತಿನ 168 ಸಂಸದರು ಅಮೆರಿಕ ಪಡೆಗಳ ವಾಪಸಾತಿ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಿದರು ಹಾಗೂ ಚರ್ಚೆಯಲ್ಲಿ ಉಸ್ತುವಾರಿ ಪ್ರಧಾನಿಯೂ ಭಾಗವಹಿಸಿದರು.
ಐಸಿಸ್ ಉಗ್ರರ ವಿರುದ್ಧದ ಯುದ್ಧದಲ್ಲಿ ಇರಾಕ್ ಸೈನಿಕರಿಗೆ ಸಹಾಯ ಮಾಡುವುದಕ್ಕಾಗಿ ಸುಮಾರು 5,200 ಅಮೆರಿಕ ಸೈನಿಕರು ಇರಾಕ್‌ನ ವಿವಿಧ ನೆಲೆಗಳಲ್ಲಿ ಇದ್ದಾರೆ.
ಇರಾಕ್ ವಿರುದ್ಧ ದಿಗ್ಬಂಧನ: ಟ್ರಂಪ್ ಎಚ್ಚರಿಕೆ
ಇರಾಕ್ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಎಚ್ಚರಿಕೆ ನೀಡಿದ್ದಾರೆ. ಇರಾಕ್‌ನಿಂದ ಹೋಗುವಂತೆ ದೇಶದ ಸಂಸತ್ತು ಅಮೆರಿಕ ಸೈನಿಕರಿಗೆ ಕರೆ ನೀಡಿದ ಬಳಿಕ ಅವರು ಈ ಎಚ್ಚರಿಕೆ ಹೊರಡಿಸಿದ್ದಾರೆ.
ಅಮೆರಿಕ ಸೈನಿಕರು ಇರಾಕ್‌ನಿಂದ ಹೋದರೆ, ಅಲ್ಲಿರುವ ವಾಯುನೆಲೆಯ ವೆಚ್ಚವನ್ನು ಇರಾಕ್ ಪಾವತಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.
‘‘ಬಗ್ದಾದ್‌ನಲ್ಲಿ ನಾವು ಅತ್ಯಂತ ದುಬಾರಿ ವಾಯುನೆಲೆಯೊಂದನ್ನು ಹೊಂದಿದ್ದೇವೆ. ಅದನ್ನು ಕಟ್ಟಲು ಬಿಲಿಗಟ್ಟಳೆ ಡಾಲರ್ ವೆಚ್ಚವಾಗಿದೆ. ಅದರ ವೆಚ್ಚವನ್ನು ನೀಡದಿದ್ದರೆ ನಾವು ಅಲ್ಲಿಂದ ಹೋಗುವುದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.