ವೈದ್ಯರು ರೋಗಿಯ ಆರೋಗ್ಯವನ್ನು, ಪೊಲೀಸರು ಸಮಾಜದ ಆರೋಗ್ಯವನ್ನು ಕಾಪಾಡುವವರಾಗಿದ್ದಾರೆ : ಅರುಣ್ ಚಕ್ರವರ್ತಿ

Update: 2020-01-06 16:52 GMT

ಕೊಣಾಜೆ: ವೈದ್ಯರು ರೋಗಿಯ ಆರೋಗ್ಯವನ್ನು ಕಾಪಾಡುವವರಾದಲ್ಲಿ , ಪೊಲೀಸರು ಸಮಾಜದ ಆರೋಗ್ಯ ಕಾಪಾಡುವವರಾಗಿ ದ್ದಾರೆ.  ವೈದ್ಯರ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನದ ಮುಖೇನ ಮುಂದೆ ಆಗುವ ಲಕ್ಷಣಗಳನ್ನು  ನೂತನ ತಂತ್ರಜ್ಞಾನಗಳಿಂದ ಅರಿಯಬಹುದು. ಆದರೆ ಪೊಲೀಸ್ ಇಲಾಖೆಗಳಲ್ಲಿ ಅಂತಹ ತಂತ್ರಜ್ಞಾನಗಳು ಇಲ್ಲ. ಇರುತ್ತಿದ್ದರೆ ಇತ್ತೀಚೆಗೆ ನಡೆಯುತ್ತಿದ್ದ ಮಂಗಳೂರು ಸೇರಿದಂತೆ ದೇಶಾದ್ಯಂತ ನಡೆಯುತ್ತಿದ್ದ ಗಲಾಟೆಗಳನ್ನು ನಿಯಂತ್ರಿಸಬಹುದಿತ್ತು ಎಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅಭಿಪ್ರಾಯಪಟ್ಟರು.

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮೂತ್ರಪಿಂಡ ಕಸಿ ಮತ್ತು ರೋಬೋಟಿಕ್ ಸರ್ಜರಿ ಆಶ್ರಯದಲ್ಲಿ  ಮೂತ್ರಶಾಸ್ತ್ರ ವಿಭಾಗದ ದಶಮಾನೋತ್ಸವ  ಸಮಾರಂಭದಲ್ಲಿ ಹಿರಿಯ ಮೂತ್ರಶಾಸ್ತ್ರಜ್ಞರಾದ  ಡಾ.ಪಿ ವೇಣುಗೋಪಾಲ್ ಮತ್ತು ಡಾ.ಇ.ಸುಲೈಮಾನ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ದಶಕಗಳ ಹಿಂದೆ ಕಿರಿ ವಯಸ್ಸಿನಲ್ಲಿ ಅನೇಕ ಸಾಧಕರಿದ್ದರು. ಆದರೆ ಸದ್ಯ ಸಾಧಕರ ಸರಾಸರಿ ವಯಸ್ಸು ಬದಲಾಗುತ್ತಲೇ ಇದೆ. ಅಪರಾಧ ಜಗತ್ತಿನಲ್ಲಿಯೂ ಸಾಧಕರ ಸಂಖ್ಯೆ ಇಳಿಮುಖವಾಗಿದೆ ಎಂದರು.

ನೀತಿಶಾಸ್ತ್ರ, ನೈತಿಕ  ಮೌಲ್ಯಗಳು, ಸಾರ್ವತ್ರಿಕ ಸಹೋದರತ್ವವನ್ನು ಶಿಕ್ಷಣ ಸಂಸ್ಥೆಗಳು ಬೋಧಿಸುತ್ತವೆ. ಈ ಮುಖೇನ ವಿದ್ಯಾರ್ಥಿಗಳು ಸಮಾಜದ ಹಿತವನ್ನು  ಬಯಸುವ ಮೂಲಕ ಶಿಕ್ಷಕರು ಕಲಿಸಿದ ಆದರ್ಶಗಳೊಂದಿಗೆ ಬಾಳುವುದರಿಂದ ಪ್ರತಿ ಯೊಂದು ಕ್ಷೇತ್ರಗಳಲ್ಲಿ ನಾಯಕನಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ  ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ, ಯೆನೆಪೋಯ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗ ಹತ್ತು ವರ್ಷಗಳಲ್ಲಿ ಅನೇಕ ಸಾಧನೆಗಳನ್ನು ನಡೆಸಲು  ವಿಭಾಗದ ಸಿಬ್ಬಂದಿ ಹಾಗೂ ಮುಖ್ಯಸ್ಥರ ಶ್ರಮದಿಂದ ಸಾಧ್ಯವಾಗಿದೆ. ಲೇಸರ್ ಚಿಕಿತ್ಸೆ, ಲೆಪ್ರೋಸ್ಕೋಪಿ, ರೋಬೋಟಿಕ್ ಟ್ರಾನ್ಸ್ ಪ್ಲಾಂಟ್ ನಂತ ನೂತನ ತಂತ್ರಜ್ಞಾನಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನುಕೂಲವಾಗುವಂತಹ ಸೇವೆಯನ್ನು ಸಂಸ್ಥೆ ನೀಡುತ್ತಿದೆ ಎಂದರು.

ಈ ಸಂದರ್ಭ ಯೆನೆಪೋಯ ವಿ.ವಿ ಉಪಕುಲಪತಿ ಡಾ.ಎಂ. ವಿಜಯ್ ಕುಮಾರ್, ವೈದ್ಯಕೀಯ ಕಾಲೇಜು ಡೀನ್ ಡಾ. ಎಂ.ಎಸ್ ಮೂಸಬ್ಬ,   ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ ಭಟ್ ಉಪಸ್ಥಿತರಿದ್ದರು.

ಡಾ.ನಿಶ್ಚಿತ್ ಡಿಸೋಜ ಮೂತ್ರಶಾಸ್ತ್ರ ವಿಭಾಗ 10 ವರ್ಷಗಳಲ್ಲಿ ನಡೆಸಿದ ಸಾಧನೆಗಳ ವಿವರ ನೀಡಿದರು. ಮೂತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಮುಜೀಬುರ್ರಹಿಮಾನ್ ಸ್ವಾಗತಿಸಿದರು.  ಸುನೀತಾ ಪ್ರಭು ನಿರೂಪಿಸಿದರು. ಡಾ.ಅಲ್ತಾಫ್ ಖಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News