ಜೆಎನ್‌ಯು ಹಿಂಸಾಚಾರ ಖಂಡಿಸಿ ಲಂಡನ್, ನೇಪಾಳದ ವಿವಿಗಳಲ್ಲೂ ಪ್ರತಿಭಟನೆ
ಹೊಸದಿಲ್ಲಿ, ಜ.6: ಜೆಎನ್‌ಯುವಿನಲ್ಲಿ ರವಿವಾರ ನಡೆದ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಟನೆ ನಡೆದಿರುವಂತೆಯೇ, ಲಂಡನ್, ನೇಪಾಳ ಮತ್ತಿತರ ದೇಶದಲ್ಲೂ ಪ್ರತಿಭಟನೆ ನಡೆದಿದೆ.
ಪಾಂಡಿಚೇರಿ ವಿವಿ, ಬೆಂಗಳೂರು ವಿವಿ, ಹೈದರಾಬಾದ್ ವಿವಿ, ಆಲಿಗಢ ಮುಸ್ಲಿಂ ವಿವಿ, ಮುಂಬೈ ವಿವಿ, ದಿಲ್ಲಿ ವಿವಿ, ಅಂಬೇಡ್ಕರ್ ವಿವಿ, ಬನಾರಸ್ ಹಿಂದು ವಿವಿ, ಚಂಡೀಗಢ ವಿವಿ, ಬೆಂಗಳೂರಿನ ನ್ಯಾಷನಲ್ ಲಾ ವಿವಿ,ಪುಣೆಯ ಸಾವಿತ್ರಿ ಬಾ ಫುಲೆ ವಿವಿ, ಟಿಐಎಸ್‌ಎಸ್ ಮುಂಬೈ, ಜಾಧವ್‌ಪುರ ವಿವಿ, ಕೋಲ್ಕತಾದ ಪ್ರೆಸಿಡೆನ್ಸಿ ವಿವಿ ಮತ್ತು ಐಐಟಿ ಬಾಂಬೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮುಂಬೈಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ಜಿತೇಂದ್ರ ಅವ್ಹಾದ್ ಭಾಗವಹಿಸಿದ್ದರು. ಪುಣೆಯ ‘ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್’ನ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದಾರೆ.
ಲಂಡನ್‌ನ ಆಕ್ಸ್‌ಫರ್ಡ್ ವಿವಿ, ಕೊಲಂಬಿಯಾ ವಿವಿ, ಸಸೆಕ್ಸ್ ವಿವಿಗಳಲ್ಲಿ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸುವ ಫಲಕಗಳನ್ನು ಹಿಡಿದುಕೊಂಡು ವೌನ ಮೆರವಣಿಗೆ ನಡೆಸಿದರು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜೆಎನ್‌ಯುವಿನ ಪೂರ್ವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.