'ಗುಂಡೇಟಿನಿಂದ ಕೈಯನ್ನೇ ಕಳೆದುಕೊಂಡಿದ್ದೇನೆ': ನಿವೃತ್ತ ನ್ಯಾ.ಗೋಪಾಲಗೌಡರ ಮುಂದೆ ಸಂತ್ರಸ್ತರ ಅಳಲು
ಮಂಗಳೂರು, ಜ. 7: ಮಂಗಳೂರಿನಲ್ಲಿ ಡಿ. 19ರಂದು ನಡೆದ ಪೊಲೀಸ್ ಗೋಲಿಬಾರ್ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ಸಾರ್ವಜನಿಕರು ಹಾಗೂ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಲು ಆಗಮಿಸಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದ ತಂಡ ಇಂದು ಆಸ್ಪತ್ರೆಯಲ್ಲಿರುವ ಗಾಯಾಳುಗಳ್ನು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಆರಂಭದಲ್ಲಿ ಹೈಲ್ಯಾಂಡ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಂಡ, ಬಳಿಕ ಗೋಲಿಬಾರ್‌ನಿಂದ ಗಾಯಾಳುವಾಗಿ ಎರಡೆರಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅಬು ಸಾಲಿ ಕಂದಕ್ ಅವರನ್ನು ಮಾತನಾಡಿಸಿತು.
ಘಟನೆಯ ವಿವರ ನೀಡಿದ ಅಬು ಸಾಲಿಯವರು, ‘‘ಮೊದಲೇ ಗಾಯಾಳುವಾಗಿದ್ದ ನಾನು ಇದೀಗ ಗುಂಡೇಟು ತಗಲಿ ಕೈಯ ಬಲವನ್ನೇ ಕಳೆದುಕೊಂಡಿದ್ದೇನೆ. ನಾನು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ನಾನು ನನ್ನ ಕೆಲಸ ಮುಗಿಸಿ ತೆರಳುತ್ತಿದ್ದೆ. ನನ್ನ ಈ ಪರಿಸ್ಥಿತಿಯಲ್ಲಿ ಮುಂದೆ ನಾನು ದುಡಿಯುವುದು ಹೇಗೆ ? ಕುಟುಂಬವನ್ನು ಸಲಹುವುದು ಹೇಗೆ ? ನಮಗೆ ಯಾರು ಗತಿ ?’’ ಎಂದು ಕಣ್ಣೀರಿಟ್ಟರು.
ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಪ್ರತಿಕ್ರಿಯಿಸಿ, ಧೃತಿಗೆಡದಿರಿ, ಧೈರ್ಯವಾಗಿರಿ. ಸಮಾಜದಲ್ಲಿ ಒಳ್ಳೆಯವರು ಇದ್ದಾರೆ. ಘಟನೆ ನಡೆದು ಹೋಗಿದೆ. ನಿಮಗೆ ಸಿಗಬೇಕಾದ ನ್ಯಾಯ ಸಿಗಲಿದೆ’’ ಎಂದು ಧೈರ್ಯ ತುಂಬಿದರು.
ಆಸ್ಪತ್ರೆಯಲ್ಲಿ ಇನ್ನೋರ್ವ ಗೋಲಿಬಾರ್ ಗಾಯಾಳು ಇಮ್ರಾನ್ ಅವರನ್ನು ಕೂಡಾ ಮಾತನಾಡಿಸಿದ ತಂಡ ವೈದ್ಯರಿಂದ ಮಾಹಿತಿಯನ್ನು ಪಡೆಯಿತು.
ಬಳಿಕ ಯುನಿಟಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿ ಬಿಡುಗಡೆಗೊಂಡಿರುವ ರೋಗಿಗಳ ಮಾಹಿತಿಯನ್ನು ತಂಡ ವೈದ್ಯರಿಂದ ಪಡೆಯಿತು. ಬಳಿಕ ಗೋಲಿಬಾರ್‌ನಲ್ಲಿ ಮೃತಪಟ್ಟ ಜಲೀಲ್‌ರವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಂದ ಮಾಹಿತಿಯನ್ನು ಸಂಗ್ರಹಿಸಿತು. ಬಳಿಕ ಘಟನಾ ಸ್ಥಳದ ಪರಿಶೀಲನೆ ನಡೆಸಿತು.
ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್, ಹಿರಿಯ ಪತ್ರಕರ್ತ ಸುತ ಶ್ರೀನಿವಾಸರಾಜು ಜತೆಯಲ್ಲಿದ್ದರು.
ಲಿಸನಿಂಗ್ ಪೋಸ್ಟ್ (ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸಿಟಿಟ್ಯೂಟ್ , ಅಸೋಸಿಯೇಶನ್ ಫಾರ್ ದಿ ಪ್ರೊಟೆಕ್ಷನ್ ಆಫ್ ದಿ ಸಿವಿಲ್ ರೈಟ್ಸ್ (ಎಪಿಸಿಆರ್) ಮತ್ತು ಸಂವಿಧಾನದ ಹಾದಿಯಲ್ಲಿ ಸಂಸ್ಥೆಗಳು ಜಂಟಿಯಾಗಿ) ಸಂಸ್ಥೆ ವತಿಯಿಂದ ಆಯೋಜಿಸಲಾದ ಜನತಾ ನ್ಯಾಯಾಲಯದ ನಿಮಿತ್ತ ತಂಡ ಸೋುವಾರ ಮಂಗಳೂರಿಗೆ ಆಗಮಿಸಿತ್ತು. ನಿನ್ನೆ ಮೃತ ಜಲೀಲ್ ರವರ ಮಕ್ಕಳು ಸೇರಿದಂತೆ 16 ಮಂದಿಯಿಂದ ಅಹವಾಲು ಸ್ವೀಕರಿಸಿತ್ತು.
ಬುಲೆಟ್, ಶೆಲ್ ಗಾಯದ ವ್ಯತ್ಯಾಸ ವಿವರಿಸಿದ ಬಿ.ಟಿ. ವೆಂಕಟೇಶ್
ಡಿ. 19ರಂದು ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಬು ಸಾಲಿಯವರಿಗೆ ಶೆಲ್ ದಾಳಿಯಿಂದ ಗಾಯವಾಗಿ ಬಲಗೈಯ ಮಾಂಸಖಂಡವೇ ಹರಿದು ಹೋಗಿರುವ ವಿಷಯವನ್ನು ವೈದ್ಯರು ಮಾಹಿತಿ ನೀಡಿದರು. ಇದೇ ವೇಳೆ ಇನ್ನೋರ್ವ ಗಾಯಾಳು ಇಮ್ರಾನ್ ಅವರಿಗೆ ಬುಲೆಟ್ ಏಟು ತಗಲಿದ್ದು, ಶೆಲ್ ಹಾಗೂ ಬುಲೆಟ್‌ನ ಗಾಯದಿಂದಾಗುವ ವ್ಯತ್ಯಾಸ ಹಾಗೂ ಗಂಭೀರತೆಯ ಕುರಿತಂತೆ ಹಿರಿಯ ನ್ಯಾಯವಾದಿ ಬಿ.ಟಿ. ವೆಂಕಟೇಶ್‌ರವರು ತಂಡದ ಇತರ ಸದಸ್ಯರಿಗೆ ಮಾಹಿತಿ ನೀಡಿದರು.