ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣ : ಘಟನೆಯ ಬಗ್ಗೆ 14 ಮಂದಿ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ
ಮಂಗಳೂರು, ಜ.7: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಡಿ.19ರಂದು ಸಂಭವಿಸಿದ ಘರ್ಷಣೆಯ ಸಂದರ್ಭ ನಡೆದ ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ನಗರದ ಮಿನಿ ವಿಧಾನ ಸೌಧದಲ್ಲಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತಾಲಯದ ನ್ಯಾಯಾಲಯದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಮಂಗಳವಾರ ನಡೆಸಿದ ಮ್ಯಾಜಿಸ್ಟ್ರೀಯಲ್ ವಿಚಾರಣೆಯಲ್ಲಿ 14 ಮಂದಿ ಪ್ರತ್ಯಕ್ಷದರ್ಶಿಗಳು ಲಿಖಿತ ಹೇಳಿಕೆ ದಾಖಲಿಸಿದ್ದಾರೆ.
ಮೃತ ನೌಶೀನ್‌ನ ತಾಯಿ ಮುಮ್ತಾಝ್, ಜಲೀಲ್‌ರ ಸಹೋದರಿ ನಸೀಮಾ ಹಾಗೂ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರಾ, ಶಹನಾಝ್, ಆಯಿಶಾ ಮತ್ತಿತರರು ಹೇಳಿಕೆ ನೀಡಿದ್ದಾರೆ.
ಹೇಳಿಕೆಗಳನ್ನು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕರಣದ ತನಿಖಾಧಿಕಾರಿ ಜಗದೀಶ್ ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಘಟನೆಯ 14 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಇಂದು ಪಡೆಯಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ಮತ್ತು ಪೊಲೀಸರ ಹೇಳಿಕೆಗೆ ಪ್ರತ್ಯೇಕವಾಗಿ ಇನ್ನೊಂದು ದಿನ ನಿಗದಿಪಡಿಸುವೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಮಾನವ ಹಕ್ಕು ಆಯೋಗದ ನಿರ್ದೇಶನದಂತೆ ವಿಚಾರಣೆ ಮಾಡಲಾಗುವುದು. ಘಟನೆಯ ಬಗ್ಗೆ ಹೇಳ ಬಯಸುವವರು ಖುದ್ದಾಗಿ ತನ್ನ ಮುಂದೆ ಲಿಖಿತ ಅಥವಾ ಮೌಖಿಕ ಹೇಳಿಕೆ ನೀಡಬಹುದು. ನ್ಯಾಯವಾದಿಗಳ ಮೂಲಕ ಹೇಳಿಕೆಗೆ ಅವಕಾಶವಿಲ್ಲ. ತನಿಖೆಯ ವರದಿಯನ್ನು ಮೂರು ತಿಂಗಳೊಳಗೆ ಸರಕಾರಕ್ಕೆ ಸಲ್ಲಿಸಲಾಗುವುದು. ಗೋಲಿಬಾರ್‌ಗೆ ಕಾರಣ ಏನು? ಅದರ ಅಗತ್ಯವಿತ್ತೇ? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದ ಡಿಸಿ ಜಗದೀಶ್, ಸಿಐಡಿ ತನಿಖೆಗೂ ಮ್ಯಾಜಿಸ್ಟ್ರೀಯಲ್ ತನಿಖೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸರಿಂದ ಎಫ್‌ಐಆರ್ ಮತ್ತು ಠಾಣೆಯ ದಿನಚರಿಯ ಪ್ರತಿ ಹಾಗೂ ಮರಣೋತ್ತರ ಪರೀಕ್ಷೆಯ ವರದಿ, ಸಿಸಿಟಿವಿ ಫೂಟೇಜ್ ಸಂಗ್ರಹಿಸಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಮತ್ತು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಹೇಳಿಕೆ ಪಡೆಯುವ ಬಗ್ಗೆ ಸ್ಪಷ್ಟ ನಿರ್ದೇಶನ ಬಂದಿಲ್ಲ. ಆದರೂ ಅವರ ದೂರುಗಳಿಗೆ ಸ್ಪಂದಿಸಲಾಗುವುದು ಎಂದು ಜಗದೀಶ್ ಹೇಳಿದರು.
ತನಿಖಾಧಿಕಾರಿಯ ಮುಂದೆ ಹೇಳಿಕೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರತ್ಯಕ್ಷದರ್ಶಿಗಳು ಪೊಲೀಸರ ವೈಫಲ್ಯದ ಬಗ್ಗೆಯೇ ಬೊಟ್ಟು ಮಾಡಿದ್ದಾರೆ. ಪೊಲೀಸರೇ ಪ್ರತಿಭಟನಾಕಾರರನ್ನು ಉದ್ರಿಕ್ತರಾಗುವಂತೆ ಮಾಡಿದರು. ಪೊಲೀಸರು ಸ್ವಲ್ಪ ಸಂಯಮದಿಂದ ವರ್ತಿಸಿದ್ದರೆ ಇಂತಹ ಘಟನೆಗಳು ಆಗುತ್ತಿರಲಿಲ್ಲ. ಇಬ್ಬರು ಅಮಾಯಕರು ಬಲಿಯಾಗುತ್ತಿರಲಿಲ್ಲ. ಅವರನ್ನು ಪೊಲೀಸರು ವಿನಾಕಾರಣ ಕೊಂದು ಹಾಕಿದರು. ಅವರಿಗೆ ಶಿಕ್ಷೆ ಆಗಲೇಬೇಕು. ಅದಕ್ಕಾಗಿ ನಾವು ಇಂದು ತನಿಖಾಧಿಕಾರಿಯ ಮುಂದೆ ಹೇಳಿಕೆ ದಾಖಲಿಸಿದ್ದೇವೆ ಎಂದರಲ್ಲದೆ, ಪೊಲೀಸ್ ಅಧಿಕಾರಿಗಳು ವಾಸ್ತವ ಮರೆಮಾಚಲು ಸುಳ್ಳುಗಳನ್ನೇ ಹೆಣೆಯುತ್ತಿ ದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಈ ಸಂದರ್ಭ ವಿವಿಧ ಸಂಘಟನೆಗಳ ಮುಖಂಡರಾದ ಉಮರ್ ಯುಎಚ್, ಡಿಎಂ ಅಸ್ಲಂ, ಸಲೀಂ ಯುಬಿ ಮತ್ತಿತರರು ಪಾಲ್ಗೊಂಡಿದ್ದರು.
ಮಂಗಳವಾರ ಪೂರ್ವಾಹ್ನ 11 ಗಂಟೆಯಿಂದ 1:30ರವರೆಗೆ ಹೇಳಿಕೆಗಳನ್ನು ದಾಖಲಿಸಲು ಸಮಯವಕಾಶ ನೀಡಲಾಗಿತ್ತು. ಆದರೆ, 11:30ರವರೆಗೂ ಯಾರೂ ಹೇಳಿಕೆ ನೀಡಲು ಬಂದಿರಲಿಲ್ಲ. ಬಳಿಕ ಒಬ್ಬೊಬ್ಬರೇ ಆಗಮಿಸಿದ್ದು, 14 ಮಂದಿ ಹೇಳಿಕೆ ದಾಖಲಿಸಿದರು.