×
Ad

ಉಡುಪಿ ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟುಗಳ ಹೂಳೆತ್ತಲು ಸೂಚನೆ: ಬೊಮ್ಮಾಯಿ

Update: 2020-01-07 20:13 IST

ಉಡುಪಿ, ಜ.7: ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟುಗಳಿಂದ ಹೂಳೆತ್ತುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ರಾಜ್ಯ ಗೃಹ ಮತ್ತು ಸಹಕಾರಿ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಜಿಪಂನ ತ್ರೈಮಾಸಿಕ ಕೆಡಿಪಿ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಣಯಗಳ ಕುರಿತು ವಿವರಿಸುತ್ತಾ ಅವರು ಈ ವಿಷಯ ತಿಳಿಸಿದರು.

ಕಿಂಡಿ ಅಣೆಕಟ್ಟುಗಳ ಹೂಳೆತ್ತುವ ಕುರಿತಂತೆ ಈವರೆಗೆ ಈವರೆಗೆ ಇದ್ದ ಬಿಕ್ಕಟ್ಟನ್ನು ನಿವಾರಿಸಿ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳ ಹೂಳೆತ್ತುವ ಕಾಮಗಾರಿಯನ್ನು ಪಿಡಿಓ, ನಗರ ಪ್ರದೇಶ ಗಳದ್ದನ್ನು ಆಯುಕ್ತರು ಹಾಗೂ ತಾಲೂಕು ಪ್ರದೇಶದ ಅಣೆಕಟ್ಟುಗಳನ್ನು ಕಾರ್ಯ ನಿರ್ವಹಣಾಧಿಕಾರಿಗಳು ನಿರ್ವಹಿಸಬೇಕು. ಹೂಳೆತ್ತಿದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸುಪರ್ದಿಗೆ ಒಪ್ಪಿಸಿ ಎಲಂ ಮೂಲಕ ಅದನ್ನು ಮಾರಾಟ ಮಾಡಬೇಕು. ಇದರಿಂದ 80ರಿಂದ 90 ಲಕ್ಷ ರೂ.ಆದಾಯದ ನಿರೀಕ್ಷೆ ಇದ್ದು, ಈ ಹಣವನ್ನು ನದಿ ಹೂಳೆತ್ತಲು ಬಳಸಬೇಕು ಎಂದು ಸೂಚಿಸ ಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯಲ್ಲಿ ಸಿಆರ್‌ಝಡ್, ನಾನ್‌ಸಿಆರ್‌ಝಡ್ ವಿಷಯದ ಕುರಿತಂತೆ ಇರುವ ಕೆಲವು ಸಮಸ್ಯೆಗಳನ್ನು ಮುಂದಿನ ವಾರ ಅರಣ್ಯ, ಪರಿಸರ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರ ಸಭೆಯನ್ನು ಕರೆದು ಅದರಲ್ಲಿ ಕೂಲಂಕಷವಾಗಿ ಚರ್ಚಿಸಿ ಬಗೆಹರಿಸಲಾಗುವುದು ಎಂದರು.

ಅದೇ ರೀತಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸಹ ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಇದರೊಂದಿಗೆ ಜಿಲ್ಲೆಯಲ್ಲಿರುವ ವಸತಿ ಯೋಜನೆಯ ಸಮಸ್ಯೆಯನ್ನು ನಾಳೆ ಬರುವ ವಸತಿ ಸಚಿವ ವಿ.ಸೋಮಣ್ಣರ ಸಮಕ್ಷಮ ಚರ್ಚಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಕೃಷಿ ಸಮ್ಮಾನ್ ಯೋಜನೆಯಲ್ಲಿ 1.39 ಲಕ್ಷ ಫಲಾನುಭವಿಗಳಿದ್ದು, ಎಲ್ಲರಿಗೂ ಎರಡು ಕಂತುಗಳಲ್ಲಿ ಹಣ ಬಂದಿದೆ. ಮೂರನೇ ಕಂತು ಕೆಲವರಿಗೆ ಬಂದಿದ್ದು, ನಾಲ್ಕನೇ ಕಂತಿನ ಹಣವನ್ನು ನೀಡಲು ಪ್ರಾರಂಭಿಸಲಾಗಿದೆ. ಇದರಲ್ಲಿ ರಾಜ್ಯದ ಪಾಲನ್ನು ನೀಡಲಾಗಿದೆ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಇನ್ನೂ ಬಾಕಿ ಉಳಿದಿರುವ 3000 ರೇಷನ್ ಕಾರ್ಡ್ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಿ, ಫೆಬ್ರವರಿ ತಿಂಗಳ ಕೊನೆಯೊಳಗೆ ಎಲ್ಲರಿಗೂ ಕಾರ್ಡುಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ 2018-19ರ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇವುಗಳನ್ನು ಕೂಡಲೇ ಮುಗಿಸಿ ಮುಂದಿನ ಸಾಲಿನ ಯೋಜನೆಯನ್ನು ಕೈಗೆತ್ತಿಕೊಳ್ಳಲು ತಿಳಿಸಲಾಗಿದೆ ಎಂದರು.

ಪ್ರಾಕೃತಿಕ ವಿಕೋಪದಿಂದ ನಷ್ಟ ಅನುಭವಿಸಿರುವ 1191ಕೃಷಿಕರಿಗೆ ಪರಿಹಾರ ನೀಡಲು ಸಾಫ್ಟ್‌ವೇರ್‌ನಲ್ಲಿ ನೊಂದಾವಣೆ ಗೊಂಡಿದೆ. ಹಣವನ್ನು ಕೂಡಲೇ ಬಿಡುಗಡೆಗೊಳಿಸಲು ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದರು.

ಹೂಡಿಕೆದಾರರ ಸಮಾವೇಶ: ಜಿಲ್ಲೆಗೆ ಬಂಡವಾಳ ಹೂಡುವವರನ್ನು ಸೆಳೆಯಲು ಮುಂದಿನ ತಿಂಗಳು ಜಿಲ್ಲೆಯಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಆರೋಗ್ಯ ಇಲಾಖೆ ಯಲ್ಲಿ ಕೊರತೆ ಇರುವ ವೈದ್ಯರ ಖಾಲಿ ಸ್ಥಾನವನ್ನು ತುಂಬಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಸಿ ಮತ್ತು ಡಿ ದರ್ಜೆ ನೌಕರರ ನೇಮಕಕ್ಕೂ ಕ್ರಮ ಜರಗಿಸಲು ತಿಳಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ದಿ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು, ಕೆಲವಕ್ಕೆ ಗುರಿ ನಿಗದಿ ಪಡಿಸಲಾಗಿದೆ. ಇವುಗಳನ್ನು ಅನುಷ್ಠಾನ ಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ಜಿ ಪಂ ಸಿಇಓರಿಗೆ ಒಪ್ಪಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಸುನಿಲ್ ಕುಮಾರ್, ಜಿಪಂ ಅಧ್ಯಕ್ಷ ದಿನಕರಬಾಬು, ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News