×
Ad

ಶೀಘ್ರವೇ ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ಬೊಮ್ಮಾಯಿ

Update: 2020-01-07 20:16 IST

ಉಡುಪಿ, ಜ.7: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಉಡುಪಿ ಜಿಲ್ಲಾಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಅತೀ ಶೀಘ್ರವೇ ಅನುಷ್ಠಾನ ಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯನ್ನು ಈಗಿರುವ 120 ಬೆಡ್‌ನಿಂದ 250 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ತಾನು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು. ಇನ್ನು ಮೂರು ವರ್ಷಗಳಲ್ಲಿ ಉಡುಪಿ ಜಿಲ್ಲೆ ಸ್ಥಾಪನೆಯ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಈ ಕನಸು ಖಂಡಿತ ಕೈಗೂಡಲಿದೆ ಎಂದರು.

ಅಲ್ಲದೇ ಜಿಲ್ಲೆಯ ಇನ್ನೂ ಅನೇಕ ಪೂರ್ಣಗೊಳ್ಳದ ಯೋಜನೆಗಳನ್ನು ಈ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ವಾರಾಹಿ ಯೋಜನೆ ಯನ್ನು ಪೂರ್ಣಗೊಳಿಸಲು ಭೂಸ್ವಾಧೀನದ ಸಮಸ್ಯೆ ಇದ್ದು, ಈ ಬಗ್ಗೆ ಜಿಲ್ಲಾದಿಕಾರಿಗಳೊಂದಿಗೆ ಮಾತನಾ ಡಿದ್ದೇನೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರಾರಂಭದ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸೂಕ್ತ ಕ್ರಮ ತೆಗೆದು ಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ನಡೆಸಲು ಒಪ್ಪಂದವನ್ನು ರಾಜ್ಯ ಮಟ್ಟದಲ್ಲಿ ಮಾಡಿಕೊಳ್ಳ ಲಾಗಿದೆ. ಇವುಗಳ ಸಾಧಕ-ಬಾದಕಗಳನ್ನು ಪುನವಿರ್ಮಶಿಸುವ ಕಾಲ ಬಂದಿದೆ. ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News