ಮುಸ್ಲಿಮರು ಒಗ್ಗಟ್ಟಾಗಬೇಕು: ಮುಸ್ಲಿಮ್ ದೇಶಗಳಿಗೆ ಮಲೇಶ್ಯ ಪ್ರಧಾನಿ ಕರೆ
Update: 2020-01-07 21:49 IST
ಕೌಲಾಲಂಪುರ (ಮಲೇಶ್ಯ), ಜ. 7: ಬಾಹ್ಯ ಬೆದರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುಸ್ಲಿಮ್ ದೇಶಗಳು ಒಗ್ಗಟ್ಟಾಗಬೇಕು ಎಂದು ಮಲೇಶ್ಯ ಪ್ರಧಾನಿ ಮಹಾತಿರ್ ಮುಹಮ್ಮದ್ ಮಂಗಳವಾರ ಹೇಳಿದ್ದಾರೆ.
ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯನ್ನು ಅಮೆರಿಕವು ಹತ್ಯೆ ಮಾಡಿರುವುದು ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಅವರು ಬಣ್ಣಿಸಿದರು.
ಮಲೇಶ್ಯ ರಾಜಧಾನಿ ಕೌಲಾಲಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ 94 ವರ್ಷದ ಮಹಾತಿರ್, ಅಮೆರಿಕ ನಡೆಸಿದ ದಾಳಿಯು ‘‘ಭಯೋತ್ಪಾದನೆ ಹೆಚ್ಚಲೂ ಕಾರಣವಾಗಬಹುದು’’ ಎಂದು ಅಭಿಪ್ರಾಯಪಟ್ಟರು.
‘‘ಮುಸ್ಲಿಮ್ ದೇಶಗಳು ಒಗ್ಗಟ್ಟಾಗಲು ಇದು ಸಕಾಲ’’ ಎಂದರು. ‘‘ನಾವು ಇನ್ನು ಸುರಕ್ಷಿತರಲ್ಲ. ಯಾರಾದರೂ ತಮಾಷೆ ಮಾಡಿದರೆ ಅಥವಾ ಏನಾದರೂ ಹೇಳಿದರೆ ಹಾಗೂ ಅವರು ಹೇಳಿದ್ದು ಇನ್ನೊಬ್ಬರಿಗೆ ಇಷ್ಟವಾಗದಿದ್ದರೆ, ಆ ಬೇರೆ ದೇಶದ ಇನ್ನೊಬ್ಬ ವ್ಯಕ್ತಿ ಡ್ರೋನ್ ಕಳುಹಿಸಿ ತಮಾಷೆ ಮಾಡಿದವನನ್ನು ಕೊಲ್ಲಬಹುದು’’ ಎಂದರು.