×
Ad

ಧರ್ಮ ಆಧಾರಿತ ದೇಶ ವಿಭಜನೆಗೆ ಸಂಘಪರಿವಾರ, ಬಿಜೆಪಿಯ ಪೂರ್ವಜರೇ ಕಾರಣ: ಶಿವಸುಂದರ್

Update: 2020-01-07 21:56 IST

ಉಪ್ಪಿನಂಗಡಿ: ಬಿಜೆಪಿ, ಸಂಘಪರಿವಾರದವರ ಪೂರ್ವಜರೇ ಧರ್ಮಾಧಾರಿತವಾಗಿ ದೇಶ ವಿಭಜನೆಗೆ ಕಾರಣ. ಅಂದು ದೇಶದ ವಿಭಜನೆಯನ್ನು ಎಲ್ಲರೂ ವಿರೋಧಿಸಿದ್ದರೆ, ಇವರು ದೇಶ ವಿಭಜನೆಯನ್ನು ಬೆಂಬಲಿಸಿದ್ದರು. 1923ರಲ್ಲೇ ಸಾರ್ವರ್ಕರ್ ಧರ್ಮಧಾರಿತವಾದ ದೇಶವನ್ನು ಮಾಡಲು ಹೊರಟಿದ್ದರು. ಆದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಎಲ್ಲರನ್ನು ಸಮಾನತೆಯಡಿ ತಂದು ದೇಶದಲ್ಲಿ ಕ್ರಾಂತಿ ಮಾಡಿದರು ಎಂದು ಪ್ರಗತಿಪರ ಚಿಂತಕ ಶಿವಸುಂದರ್ ತಿಳಿಸಿದರು.

ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‍ ಬಳಿ ಹಮ್ಮಿಕೊಳ್ಳಲಾದ "ಸಂವಿಧಾನ ಉಳಿಸಿ ದೇಶ ರಕ್ಷಿಸಿ" ಧ್ಯೇಯವಾಕ್ಯದಡಿ ಮಂಗಳವಾರ ಸಂಜೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಮ್ಮ ಲಾಭಕ್ಕಾಗಿ ದೇಶವನ್ನು ತುಂಡು ಮಾಡಲು ಹುನ್ನಾರ ನಡೆಸುತ್ತಿರುವ ಬ್ರಾಹ್ಮಣ ಶಾಹಿ ವ್ಯವಸ್ಥೆ ಇದೀಗ ಮತ್ತೆ ಇಂಥ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನವನ್ನು `ತುಕುಡೇ ತುಕುಡೇ' ಮಾಡಲು ಹೊರಟಿದೆ. ಆದ್ದರಿಂದ ಸಂವಿಧಾನದ ರಕ್ಷಣೆಗಾಗಿ ಜಾತಿ, ಧರ್ಮ ಮರೆತು ನಾವೆಲ್ಲಾ ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾಗಬೇಕಿದೆ. ಬ್ರಾಹ್ಮಣ ಶಾಹಿಯ ಮೊಸಳೆಗಳನ್ನು ಹೊಡೆದೋಡಿಸುವವರೆಗೆ ಹೋರಾಟ ನಿರಂತರವಾಗಬೇಕು ಎಂದು ಪ್ರಗತಿಪರ ಚಿಂತಕ ಶಿವಸುಂದರ್ ತಿಳಿಸಿದರು.

ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸಂವಿಧಾನವನ್ನು ಒಡೆಯಲು ಪ್ರಯತ್ನಿಸುವವರು ನಿಜವಾದ ಭಯೋತ್ಪಾದಕರಾದರೆ, ಧರ್ಮ, ದೇವರು, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಮಾನವ ಧರ್ಮವನ್ನು ವಿಭಜಿಸುವವರು ಈ ದೇಶದ ನಿಜವಾದ ದೇಶದ್ರೋಹಿಗಳು. ದಲಿತರು, ಹಿಂದುಳಿದ ವರ್ಗದವರು, ಮುಸ್ಲಿಮರು ಈ ದೇಶವನ್ನು ಕಟ್ಟಿದವರು. ಇವರು ಸ್ವಾತಂತ್ರ್ಯಕ್ಕಾಗಿ ತ್ಯಾಗ- ಬಲಿದಾನಗಳನ್ನು ನೀಡಿದ್ದಾರೆ. ಆದರೆ  ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರದ ವ್ಯಕ್ತಿಯ ಮನೆಯ ನಾಯಿ ಕೂಡಾ ಸತ್ತಿಲ್ಲ. ಆದ್ದರಿಂದ ದೇಶ ಕಟ್ಟಿದ ನಾವೇ ಈ ನೆಲದ ಮಾಲೀಕರು. ಸ್ವಾತಂತ್ರ್ಯ ಪೂರ್ವದಲ್ಲಿ 560 ರಾಜರು ತುಂಡು ಮಾಡಿದ್ದ ದೇಶವನ್ನು ಜಾತ್ಯತೀತ ತತ್ವದ ಸಂವಿಧಾನವನ್ನು ರಚಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದುಗೂಡಿಸಿದರು. ಆದರೆ ಇಂದು ಸಂಘ ಪರಿವಾದವರು ಜಾತಿ- ಧರ್ಮಗಳನ್ನು ಎತ್ತಿಕಟ್ಟಿ ದೇಶ ಛಿದ್ರ ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಈ ದೇಶಕ್ಕೆ ಅದ್ಭುತ ಕೊಡುಗೆ ನೀಡಿದ್ದು ಟಿಪ್ಪು ಸುಲ್ತಾನ್‍ರ ಖಡ್ಗ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪೆನ್ನು ಎಂದು ಪ್ರತಿಪಾದಿಸಿದರು.

ರಾಜ್ಯ ಹೈಕೋರ್ಟ್ ನ್ಯಾಯವಾದಿ ಬಾಲನ್ ಮಾತನಾಡಿ, ಬಿಜೆಪಿ, ಆರೆಸ್ಸೆಸ್ ಹಿಂದೂ ಪರವಾಗಿವೆ ಎಂಬ ಗ್ರಹಿಕೆ ತಪ್ಪು. ಇವುಗಳು ಬ್ರಾಹ್ಮಣ ಪರವಾಗಿವೆ. ದೇಶದ ಆಯಕಟ್ಟಿನ ಜಾಗದಲ್ಲಿ ಬ್ರಾಹ್ಮಣ ಶಾಹಿಗಳೇ ತುಂಬಿಕೊಂಡಿದ್ದಾರೆ. ಇವರೆಲ್ಲಾ ದಲಿತ, ಶೂದ್ರರ ವಿರೋಧಿಗಳು. ಆದ್ದರಿಂದ ಸಿಎಎ, ಎನ್‍ಆರ್ ಸಿ ತಿದ್ದುಪಡಿ ಕಾಯ್ದೆಯ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡಬೇಕು. ಪೌರತ್ವ ಸಾಬೀತಿಗಾಗಿ ದಾಖಲೆ ಕೇಳಿಕೊಂಡು ಮನೆಗೆ ಬರುವ ಅಧಿಕಾರಿಗಳಲ್ಲಿ ನಾವು ಮೊದಲು ದಾಖಲೆ ಕೇಳೋಣ. ಮೊದಲು ಅವರು ಪೌರತ್ವ ಸಾಬೀತುಪಡಿಸಲಿ. ಬೇರೆ ದೇಶದ ನಿರಾಶ್ರಿತ ಮುಸಲ್ಮಾನರು ನಮ್ಮ ದೇಶಕ್ಕೆ ಬೇಡವೆನ್ನುವುದು ಅಸ್ಪೃಶ್ಯತೆ  ಮಾಡಿದಂತೆ. ಸಂವಿಧಾನದಡಿಯಲ್ಲಿ ಅಸ್ಪೃಶ್ಯತೆ ಅಪರಾಧ. ಆದ್ದರಿಂದ ಸಿಎಎ ಬೆಂಬಲಿಸುವವರನ್ನು ಅಟ್ರಾಸಿಟಿ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಕೆಲಸ ಮೊದಲಿಗಾಗಬೇಕು. ನಿರುದ್ಯೋಗ, ಬೆಲೆಯೇರಿಕೆ ಸೇರಿದಂತೆ ನೂರಾರು ಸಮಸ್ಯೆಗಳಿದ್ದು, ಅದರನ್ನು ಮರೆಮಾಚಲು ಕೇಂದ್ರ ಸರಕಾರ ಇಂತಹ ಕಾಯ್ದೆಗಳನ್ನು ತಂದಿದೆ. ದೇಶದ ಸಂವಿಧಾನಕ್ಕೆ ಧಕ್ಕೆ ತರುವಂತಹ ಇಂತಹ ಕಾನೂನನ್ನು ತರುವ ಬದಲು ಕೋಟಿಗಟ್ಟಲೆ ದೇಶದ ಸಂಪತ್ತನ್ನು ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಬ್ರಾಹ್ಮಣ ಶಾಹಿಗಳನ್ನು ವಾಪಸ್ ದೇಶಕ್ಕೆ ಕರೆತಂದು ಶಿಕ್ಷೆ ನೀಡುವ ಕಾನೂನನ್ನು ಮೊದಲು ಕೇಂದ್ರ ಸರಕಾರ ತರಬೇಕಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ, ವಕೀಲ ಸುಧೀರ್ ಕುಮಾರ್ ಮುರೋಳ್ಳಿ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಾಂಶುಪಾಲ, ವಕೀಲ ಹನೀಫ್ ಹುದವಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಸಅದಿ ನಾವೂರ್, ಜಮಾಅತೇ ಇಸ್ಲಾಮೀ ಹಿಂದ್‍ನ ಮುಹಮ್ಮದ್ ಕುಂಞಿ, ಪಿಎಫ್‍ಐಯ ದ.ಕ. ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸಲಫಿ ಮೂಮ್‍ಮೆಂಟ್‍ನ ಇಬ್ರಾಹೀಂ ಖಲೀಲ್ ತಲಪಾಡಿ ಮಾತನಾಡಿದರು.

ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಡಬ ತಾಲೂಕು ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಕ್ಸೇವಿಯರ್ ಬೇಬಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಉಪಸ್ಥಿತರಿದ್ದರು.

ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಖತೀಬ್ ನಝೀರ್ ಅಝ್ಹ್‍ರಿ ಬೊಳ್ಮಿನಾರ್ ಸ್ವಾಗತಿಸಿದರು. ಝಕಾರಿಯಾ ಕೊಡಿಪ್ಪಾಡಿ ವಂದಿಸಿದರು. ಜಲೀಲ್ ಮುಕ್ರಿ ಹಾಗೂ ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News