×
Ad

ಜ.8ರಂದು ಬಂದ್ ಇಲ್ಲ, ಮುಷ್ಕರ ಮಾತ್ರ: ಗೃಹ ಸಚಿವ ಬೊಮ್ಮಾಯಿ

Update: 2020-01-07 22:14 IST

ಉಡುಪಿ, ಜ. 7: ರಾಜ್ಯಾದ್ಯಂತ ಜ.8ರಂದು ಯಾವುದೇ ಬಂದ್ ಇರುವುದಿಲ್ಲ, ಕೇವಲ ಮುಷ್ಕರ ಮಾತ್ರ ನಡೆಯಲಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಹೀಗಾಗಿ ನಾಳೆ ರಾಜ್ಯದಲ್ಲಿ ಯಾವುದೇ ಬಂದ್ ಇಲ್ಲ ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತಾನು ಸಿಐಟಿಯು ಅಧ್ಯಕ್ಷ ಅನಂತಸುಬ್ಬರಾವ್ ಅವರೊಂದಿಗೆ ಮಾತನಾಡಿದಾಗ ಅವರು ಈ ವಿಷಯ ತಿಳಿಸಿದ್ದಾರೆ. ಆದ್ದರಿಂದ ನಾಳೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದರು. ಸಂಘಟಕರಿಂದ ಮುಷ್ಕರ ಹಾಗೂ ಪ್ರತಿಭಟನೆ ನಡೆಯಲಿರುವುದರಿಂದ ರಾಜ್ಯಾದ್ಯಂತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದವರು ಸ್ಪಷ್ಟಪಡಿಸಿದರು.

ಬುಧವಾರ ಸಾರ್ವತ್ರಿಕ ಮುಷ್ಕರ: ದೇಶದ ಹತ್ತು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಇಂಟಕ್ ಮತ್ತಿತರರು ಹಾಗೂ ಬ್ಯಾಂಕ್, ವಿಮೆ, ರಕ್ಷಣಾ ವಲಯ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಇತ್ಯಾದಿ ಸಂಘಟನೆಗಳು ನೀಡಿದ ಕರೆಯಂತೆ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಮತ್ತು ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಜ.8ರಂದು ದೇಶದಾದ್ಯಂತ ಒಂದು ದಿನದ ಸಾರ್ವತ್ರಿಕ ಮುಷ್ಕರ ಆಚರಿಸಲಾಗುವುದು ಎಂದು ಉಡುಪಿ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಸಂಚಾಲಕರಾದ ಕೆ.ಶಂಕರ್ ತಿಳಿಸಿದ್ದಾರೆ.

ಇದರ ಅಂಗವಾಗಿ ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 10 ಗಂಟೆಗೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆ ಹೊರಟು ಕವಿಮುದ್ದಣ ರಸ್ತೆ, ಜೋಡುಕಟ್ಟೆ ಮೂಲಕ ಅಜ್ಜರಕಾಡಿನಲ್ಲಿರುವ ಹುತಾತ್ಮರ ಚೌಕದ ಬಳಿ ಸಮಾರೋಪಗೊಳ್ಳಲಿರುವುದು ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ನಾಳೆ ಮುಷ್ಕರ ಮಾತ್ರ ನಡೆಯಲಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲವೂ ಎಂದಿನಂತೆ ತೆರೆದಿರುತ್ತದೆ. ಸರಕಾರಿ ಬಸ್‌ಗಳು ಎಂದಿನಂತೆ ಸಂಚರಿಸಿದರೆ, ಖಾಸಗಿ ಸಿಟಿ, ಸರ್ವಿಸ್, ಎಕ್ಸ್‌ಪ್ರೆಸ್ ಬಸ್‌ಗಳೂ ಪ್ರತಿದಿನದಂತೆ ಓಡಾಟ ನಡೆಸಲಿವೆ ಎಂದು ಬಸ್ ಮಾಲರ ಸಂಘದ ಪ್ರಕಟಣೆಗಳು ತಿಳಿಸಿವೆ.

ನಾಳಿನ ಮುಷ್ಕರಕ್ಕೆ ಬೆಂಬಲ ಘೋಷಿಸಿರುವ ಜಿಲ್ಲಾ ವರ್ತಕರ ಸಂಘ, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News