ಅಖಿಲ ಭಾರತ ಮುಷ್ಕರ : ದ.ಕ. ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಬೆಂಬಲ
ಮಂಗಳೂರು, ಜ.7: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಜ.8ರ ಭಾರತ ಮುಷ್ಕರಕ್ಕೆ ದ.ಕ. ಜಿಲ್ಲೆಯಲ್ಲಿಯೂ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.
ಜಿಲ್ಲೆಯ ಕೆಲವು ರಿಕ್ಷಾ ಯೂನಿಯನ್‌ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರೂ, ರಿಕ್ಷಾ ಸೇವೆ ಎಂದಿನಂತೆ ಇರಲಿದೆ ಎಂದು ರಿಕ್ಷಾ ಮಾಲಕರು ತಿಳಿಸಿದ್ದಾರೆ.
ಮಂಗಳೂರಿನ ಪುರಭವನದ ಆವರಣದಲ್ಲಿ ಜ.8ರಂದು ಬೆಳಗ್ಗೆ 10:30ರಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆಗಳು ನಡೆಯಲಿವೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಗೆ ಅವಕಾಶ ಸಿಗದ ಕಾರಣದಿಂದ ಪುರಭವನದ ಮುಂಭಾಗ ಸಭೆ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ಸಭೆಯಲ್ಲಿ ವಿವಿಧ ವರ್ಗದ ಕಾರ್ಮಿಕ ಸಂಘಟನೆಗಳ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ. ಮಂಗಳೂರು ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಮಧ್ಯೆ ವಿವಿಧ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಬ್ಯಾಂಕಿಂಗ್ ಸೇವೆ ವ್ಯತ್ಯಯವಾಗುವ ನಿರೀಕ್ಷೆಯಿದೆ. ಎಲ್‌ಐಸಿ ಸೇರಿದಂತೆ ವಿವಿಧ ಸೇವೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಬಂದರು ಶ್ರಮಿಕರ ಸಂಘವು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಉಳಿದಂತೆ ಹಲವು ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ಕೆಎಸ್ಸಾರ್ಟಿಸಿ ನಿಗಮವು ಎಲ್ಲ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದು, ಹೀಗಾಗಿ ಬುಧವಾರ ಎಲ್ಲ ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯಾಚರಿಸಲಿದೆ.
- ಎಸ್.ಎನ್.ಅರುಣ್,
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ
‘ಎಂದಿನಂತೆ ಬಸ್ ಸಂಚಾರ’
ಮಂಗಳೂರಿನಲ್ಲಿ ಸಿಟಿ ಬಸ್‌ಗಳು ಕೂಡ ಎಂದಿನಂತೆ ಸಂಚಾರ ನಡೆಸಲಿದೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಜ.8ರ ಮುಷ್ಕರಕ್ಕೆ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲಕರ ಬೆಂಬಲವಿಲ್ಲ; ಹೀಗಾಗಿ ಎಂದಿನಂತೆ ಬಸ್ ಸಂಚಾರವಿರಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.