×
Ad

ಅಮೆರಿಕವು ಅಂತರ್‌ರಾಷ್ಟ್ರೀಯ ಯುದ್ಧ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ: ರಕ್ಷಣಾ ಕಾರ್ಯದರ್ಶಿ ಎಸ್ಪರ್

Update: 2020-01-07 23:48 IST

ವಾಶಿಂಗ್ಟನ್, ಜ. 7: ಇರಾನ್‌ನ ಸಾಂಸ್ಕೃತಿಕ ಸ್ಥಳಗಳ ಮೇಲೆ ದಾಳಿ ನಡೆಸುವ ಮೂಲಕ ಸಶಸ್ತ್ರ ಸಂಘರ್ಷದ ಕಾನೂನುಗಳನ್ನು ಅಮೆರಿಕ ಸೇನೆಯು ಉಲ್ಲಂಘಿಸುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸೋಮವಾರ ಹೇಳಿದ್ದಾರೆ.

ಇರಾನ್ ಅಮೆರಿಕ ನಾಗರಿಕರು ಮತ್ತು ಸೊತ್ತುಗಳ ಮೇಲೆ ದಾಳಿ ನಡೆಸಿದರೆ, ಆ ದೇಶದ ಸಾಂಸ್ಕೃತಿಕ ಮಹತ್ವದ ಸ್ಥಳಗಳು ಸೇರಿದಂತೆ 52 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ನೀವು ಸಾಂಸ್ಕೃತಿಕ ತಾಣಗಳ ಮೇಲೆ ದಾಳಿ ನಡೆಸುತ್ತೀರಾ ಎಂಬ ಪೆಂಟಗನ್ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಎಸ್ಪರ್, ‘‘ನಾವು ಸಶಸ್ತ್ರ ಸಂಘರ್ಷದ ಕಾನೂನುಗಳನ್ನು ಅನುಸರಿಸುತ್ತೇವೆ’’ ಎಂದು ಹೇಳಿದರು.

ಹಾಗಾದರೆ, ಅಂಥ ಸ್ಥಳಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧವಾಗಿರುವುದರಿಂದ ನೀವು ಅವುಗಳ ಮೇಲೆ ದಾಳಿ ನಡೆಸುವುದಿಲ್ಲವೇ ಎಂಬುದಾಗಿ ಪತ್ರಕರ್ತರು ಕೆದಕಿದಾಗ, ‘‘ಅದು ಸಶಸ್ತ್ರ ಸಂಘರ್ಷದ ಕಾನೂನು’’ ಎಂದಷ್ಟೇ ಹೇಳಿದರು.

ಸಾಂಸ್ಕೃತಿಕ ಸ್ಥಳಗಳಲ್ಲಿ ಸೇನಾ ಕಾರ್ಯಾಚರಣೆ ನಡೆಸುವುದು, 2017ರಲ್ಲಿ ಅಂಗೀಕರಿಸಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಮತ್ತು 1954ರ ಸಾಂಸ್ಕೃತಿಕ ಸೊತ್ತುಗಳ ರಕ್ಷಣೆಗಾಗಿ ಹೇಗ್ ಒಡಂಬಡಿಕೆ ಸೇರಿದಂತೆ ಅಂತರ್‌ರಾಷ್ಟ್ರೀಯ ಕಾನೂನುಗಳಡಿ ಯುದ್ಧಾಪರಾಧವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News