ಭದ್ರತಾ ಮಂಡಳಿ ಸಭೆ: ಇರಾನ್ ವಿದೇಶ ಸಚಿವಗೆ ಅಮೆರಿಕ ವೀಸಾ ನಿರಾಕರಣೆ

Update: 2020-01-07 18:20 GMT

ವಾಶಿಂಗ್ಟನ್, ಜ. 7: ಗುರುವಾರ ನಡೆಯಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾಗವಹಿಸಲು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್‌ಗೆ ಅಮೆರಿಕ ವೀಸಾ ನಿರಾಕರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯು ನ್ಯೂಯಾರ್ಕ್‌ನಲ್ಲಿದೆ.

ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಶುಕ್ರವಾರ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಗೀಡಾದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

1947ರ ವಿಶ್ವಸಂಸ್ಥೆ ಪ್ರಧಾನಕಚೇರಿ ಒಪ್ಪಂದದ ಪ್ರಕಾರ, ಅಮೆರಿಕವು ಸಾಮಾನ್ಯವಾಗಿ ವಿಶ್ವಸಂಸ್ಥೆಗೆ ಹೋಗಲು ವಿದೇಶಿ ರಾಜತಾಂತ್ರಿಕರಿಗೆ ಅವಕಾಶ ನೀಡಬೇಕಾಗುತ್ತದೆ. ಆದರೆ, ‘ಭದ್ರತೆ, ಭಯೋತ್ಪಾದನೆ ಮತ್ತು ವಿದೇಶ ನೀತಿ’ ಕಾರಣಗಳಿಗಾಗಿ ತಾನು ವೀಸಾಗಳನ್ನು ನಿರಾಕರಿಸಬಹುದಾಗಿದೆ ಎಂದು ಅಮೆರಿಕ ಹೇಳುತ್ತದೆ.

ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

‘‘ನಾವು ಮಾಧ್ಯಮ ವರದಿಗಳನ್ನು ನೋಡಿದ್ದೇವೆ. ಆದರೆ, ವಿದೇಶ ಸಚಿವ ಝಾರಿಫ್‌ರ ವೀಸಾಕ್ಕೆ ಸಂಬಂಧಿಸಿ ನಮಗೆ ಅಮೆರಿಕದಿಂದಾಗಲಿ ವಿಶ್ವಸಂಸ್ಥೆಯಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ’’ ಎಂದು ವಿಶ್ವಸಂಸ್ಥೆಯಲ್ಲಿರುವ ಇರಾನ್ ರಾಯಭಾರ ಕಚೇರಿ ಹೇಳಿದೆ.

ಝಾರಿಫ್‌ಗೆ ಅಮೆರಿಕ ವೀಸಾ ನಿರಾಕರಿಸುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ನಿರಾಕರಿಸಿದ್ದಾರೆ.

 ಗುರುವಾರ ನಡೆಯಲಿರುವ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಝಾರಿಫ್ ಬಯಸಿದ್ದರು. ವಾಶಿಂಗ್ಟನ್ ಮತ್ತು ಟೆಹರಾನ್ ನಡುವಿನ ಪ್ರಸಕ್ತ ಉದ್ವಿಗ್ನತೆ ಸ್ಫೋಟಕ್ಕೆ ಮೊದಲೇ ಭದ್ರತಾ ಮಂಡಳಿಯ ಸಭೆ ಮತ್ತು ಝಾರಿಫ್ ಪ್ರಯಾಣ ನಿಗದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News