ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ನಿಧನ
ಉಡುಪಿ, ಜ.8: ದೃಶ್ಯ ಮಾಧ್ಯಮದ ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಮಂಗಳವಾರ ತಡರಾತ್ರಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ಪ್ರಾಯವಾಗಿತ್ತು.
ಉಡುಪಿ ಕಿನ್ನಿಮೂಲ್ಕಿಯಲ್ಲಿರುವ ತಮ್ಮ ನಿವಾಸದಲ್ಲಿ ಹಠಾತ್ತನೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುತಿದ್ದಾಗ ಅವರು ಮಾರ್ಗಮಧ್ಯದಲ್ಲೇ ಅಸುನೀಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೂಲತ: ಸುಳ್ಯ ತಾಲೂಕಿನ ವಳಲಂಬೆಯವರಾದ ರವಿರಾಜ್, ಮೈಸೂರಿನಲ್ಲಿ ‘ಆಂದೋಲನ’ ಪತ್ರಿಕೆಯ ಮೂಲಕ ವೃತ್ತಿ ಬದುಕನ್ನು ಪ್ರಾರಂಭಿಸಿದ್ದು, ಮುಂದೆ ‘ಈಟಿವಿ’ ಪ್ರಾರಂಭಗೊಂಡಾಗ ಅದರ ಉಡುಪಿ ವರದಿಗಾರರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ಸುವರ್ಣ ವಾಹಿನಿಯಲ್ಲಿ ಬೆಂಗಳೂರಿನ ರಾಜಕೀಯ ವರದಿಗಾರರಾಗಿ ಕೆಲಸ ಮಾಡಿದ್ದರು.
ಕೆಲ ವರ್ಷಗಳ ಹಿಂದೆ ಕೆಲಸಕ್ಕೆ ರಾಜಿನಾಮೆ ನೀಡಿ ಉಡುಪಿಗೆ ಮರಳಿದ್ದ ಅವರು ಉಡುಪಿಯಲ್ಲಿ ಪ್ರಾರಂಭವಾದ ಸ್ಪಂದನ ಹಾಗೂ ಪ್ರೈಮ್ ಟಿವಿಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದರು. ದೃಶ್ಯ ಮಾಧ್ಯಮದ ಆಲ್‌ರೌಂಡರ್ ಎನಿಸಿದ್ದ ರವಿರಾಜ್, ಹಲವು ಜನಪರ ವರದಿ ಹಾಗೂ ನಿಲುವುಗಳ ಮೂಲಕ ನಾಡಿನ ಗಮನ ಸೆಳೆದಿದ್ದರು.
ರವಿರಾಜ್ ಅವರ ಅಂತ್ಯಕ್ರಿಯೆ ಸುಳ್ಯದ ಹುಟ್ಟೂರಿನಲ್ಲಿ ನಡೆಯಿತು. ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಮುಂತಾದವರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.