ದಾಳಿಯ ಸಂದರ್ಭ ಪೊಲೀಸರು ಜೆಎನ್‌ಯು ಕ್ಯಾಂಪಸ್‌ನಲ್ಲೇ ಇದ್ದರು: ಎಫ್‌ಐಆರ್‌ನಲ್ಲಿ ಉಲ್ಲೇಖ
ಹೊಸದಿಲ್ಲಿ, ಜ.8: ಜನವರಿ 5ರಂದು ಜೆಎನ್‌ಯುನಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿಗಳು ನಡೆಸಿದ ಹಿಂಸಾಚಾರ ಮತ್ತು ದಾಂಧಲೆ ಸಂದರ್ಭ ಪೊಲೀಸರು ವಿವಿಯ ಆವರಣದಲ್ಲೇ ಇದ್ದರು ಎಂದು ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಜನವರಿ 5ರಂದು ಓರ್ವ ಇನ್‌ಸ್ಪೆಕ್ಟರ್ ಸಹಿತ ಪೊಲೀಸರ ತಂಡವನ್ನು ಆಡಳಿತ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಸಂಜೆ 3:45ರ ಸುಮಾರಿಗೆ ಪೆರಿಯಾರ್ ಹಾಸ್ಟೆಲ್‌ನಲ್ಲಿ ಹಿಂಸಾತ್ಮಕ ಘರ್ಷಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿದ ತಕ್ಷಣ ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿ ಸುಮಾರು 40ರಿಂದ 50ರಷ್ಟು ದುಷ್ಕರ್ಮಿಗಳು (ಮಾಸ್ಕ್ ಧರಿಸಿದ್ದರು) ದೊಣ್ಣೆಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಜೊತೆಗೆ ಆಸ್ತಿಪಾಸ್ತಿಯನ್ನೂ ಧ್ವಂಸ ಮಾಡುತ್ತಿದ್ದರು. ಪೊಲೀಸರನ್ನು ಕಂಡೊಡನೆ ದುಷ್ಕರ್ಮಿಗಳು ಪರಾರಿಯಾದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ ಜೆಎನ್‌ಯು ಆಡಳಿತ ಪೊಲೀಸರ ಭದ್ರತೆ ಕೋರಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಸಂಜೆ 7 ಗಂಟೆಯ ಸುಮಾರಿಗೆ ಸಾಬರ್‌ಮತಿ ಹಾಸ್ಟೆಲ್‌ನಲ್ಲಿ ಹಿಂಸಾಚಾರ, ದಾಂಧಲೆ ನಡೆಯುತ್ತಿರುವ ಮಾಹಿತಿ ದೊರಕಿದ್ದು ಅಲ್ಲಿಗೆ ಹೋದಾಗ ಸುಮಾರು 60ರಷ್ಟು ದುಷ್ಕರ್ಮಿಗಳು ದೊಣ್ಣೆ ಹಿಡಿದುಕೊಂಡು ದಾಂಧಲೆ ನಡೆಸುತ್ತಿದ್ದರು. ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಆಸ್ತಿಪಾಸ್ತಿಗೆ ಹಾನಿ ಎಸಗುವುದನ್ನು ಮುಂದುವರಿಸಿದರು. ನಂತರ ಅಲ್ಲಿಂದ ಓಡಿಹೋದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಆದರೆ ಜನವರಿ 7ರಂದು ಜೆಎನ್‌ಯು ಆವರಣದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ದಿಲ್ಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ, ಸಾಮಾನ್ಯವಾಗಿ ಪೊಲೀಸರನ್ನು ವಿವಿಯ ಆಡಳಿತ ವಿಭಾಗದಲ್ಲಿ ನಿಯೋಜಿಸಲಾಗುತ್ತದೆ. ಆದರೆ ಘರ್ಷಣೆ ನಡೆದ ಸ್ಥಳ ಸ್ವಲ್ಪ ದೂರದಲ್ಲಿದೆ. ಜೆಎನ್‌ಯು ಆಡಳಿತ ವರ್ಗದಿಂದ ನಮಗೆ ರಾತ್ರಿ 7:45ರ ಸುಮಾರಿಗೆ ಕರೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಹೇಳಿದ್ದರು.