ಮೈಕ್ರೋಫೈನಾನ್ಸ್‌ಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ: ಜಯನ್ ಮಲ್ಪೆ ಒತ್ತಾಯ
ಉಡುಪಿ, ಜ.8: ಸಾಲ ವಿಚಾರವಾಗಿ ಮೈಕ್ರೋಫೈನಾನ್ಸ್ಸ್‌ಗಳು ನೀಡುತ್ತಿರುವ ಮಾನಸಿಕ ಹಿಂಸೆಯಿಂದ ಅವಿಭಜಿತ ದ.ಕ. ಜಿಲ್ಲೆಯ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಕಾರಣರಾಗಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಸರಕಾರ ಕೊಲೆಯತ್ನ ಪ್ರಕರಣ ದಾಖಲಿಸಬೇಕು ಮತ್ತು ಸಾಲಗಾರರ ಮನೆಗಳಿಗೆ ಬಂದು ದೌರ್ಜನ್ಯ ಎಸಗುತ್ತಿರುವ ಇವರನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆಯ ವತಿಯಿಂದ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ದೌರ್ಜನ್ಯವನ್ನು ವಿರೋಧಿಸಿ ಹಾಗೂ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು.
ಬಡತನದ ನಿರ್ಮೂಲನೆಯ ಹೆಸರಿನಲ್ಲಿ ಬಂದ ಕಪ್ಪು ಹಣವನ್ನು ಬಿಳಿ ಹಣ ವನ್ನಾಗಿಸುವ ಷಡ್ಯಂತ್ರದ ಭಾಗವಾಗಿ ಈ ಮೈಕ್ರೋ ಫೈನಾನ್ಸ್‌ಗಳು ಹುಟ್ಟಿ ಕೊಂಡಿವೆ. ದೇಶದ 200ಕ್ಕೂ ಅಧಿಕ ಶ್ರೀಮಂತರ ಕಂಪೆನಿಗಳ ಸಾಲವನ್ನು ಮನ್ನಾ ಮಾಡಿರುವ ಸರಕಾರ, ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ, ದಲಿತರು, ಮಹಿಳೆ ಯರು ಹಾಗೂ ಬಡವರ ಮೈಕ್ರೋಫೈನಾನ್ಸ್‌ಗಳಲ್ಲಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸರಕಾರದ ನಿಯಮ ಪ್ರಕಾರ ಸಾಲಕ್ಕೆ ಶೇ.11ರಷ್ಟು ಮಾತ್ರ ಬಡ್ಡಿಯನ್ನು ವಿಧಿಸಬೇಕು. ಆದರೆ ಮೈಕ್ರೋಫೈನಾನ್ಸ್‌ನವರು ಶೇ.33ರಷ್ಟು ಅಧಿಕ ಬಡ್ಡಿಯನ್ನು ವಿಧಿಸಿ ಮಹಿಳೆಯರನ್ನು ವಂಚಿಸುತ್ತಿದ್ದಾರೆ ಮತ್ತು ಈ ಮೂಲಕ ಹಗಲು ದರೋಡೆ ನಡೆಸುತ್ತಿ ದ್ದಾರೆ. ಸರಕಾರಕ್ಕೆ ಸಾಧ್ಯವಾದರೆ ಬಡವರ ಸಾಲ ಮನ್ನಾ ಮಾಡಬೇಕು, ಇಲ್ಲವೇ ಕುರ್ಚಿಯನ್ನು ಬಿಟ್ಟು ತೊಲಗಬೇಕು ಎಂದರು.
ಈ ಮೈಕ್ರೋಫೈನಾನ್ಸ್‌ಗಳು ಬಡ ಕುಟುಂಬಗಳ ಆರ್ಥಿಕ ವ್ಯವಸ್ಥೆಯನ್ನು ಸಧೃಡಗೊಳಿಸುವುದಾಗಿ ಹೇಳಿ ಕೇಂದ್ರ ಸರಕಾರದಿಂದ ಹಣ ಪಡೆದು, ಬಡವರಿಗೆ ಮೋಸ ಮಾಡುತ್ತಿವೆ. ಇಂತಹ ಫೈನಾನ್ಸ್‌ಗಳನ್ನು ಸರಕಾರ ಕೂಡಲೇ ರದ್ದು ಮಾಡಬೇಕು. ಅದರ ಬದಲು ಸರಕಾರವೇ ನೇರವಾಗಿ ಫಲಾನುಭವಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು ಎಂದು ಅವರು ತಿಳಿಸಿದರು.
ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಕಾನೂನು ಬಾಹಿರವಾಗಿ ಅಧಿಕ ಬಡ್ಡಿ ವಿಧಿಸಿ ಸಾಲ ನೀಡುವ ಈ ಮೈಕ್ರೋ ಪೈನಾನ್ಸ್‌ಗಳು ಸಾಲ ವಸೂಲಾತಿಯ ಸಂದರ್ದಲ್ಲಿ ಸಾಲಗಾರನಿಗೆ ಬೆದರಿಕೆ, ಮನೆಯೊಳಗೆ ರಾತ್ರಿಹೊತ್ತು ಬಂದು ಹಿಂಸೆ, ಅವಮಾನ, ಜಾತಿನಿಂದನೆ ಹಾಗೂ ಬೆದರಿಕೆ ಯೊಡ್ಡುತ್ತಿದ್ದಾರೆ. ಈ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾಲಗಾರರನ್ನು ಋಣಮುಕ್ತರನ್ನಾಗಿ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಋಣಮುಕ್ತ ಸಮಿತಿಯ ಸಂಚಾಲಕ ಬಿ.ಎಂ.ಭಟ್, ಈಶ್ವರಿ ಬೆಳ್ತಂಗಡಿ, ದಸಂಸ ಮುಖಂಡರಾದ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ರಮೇಶ್ ಪಾಲನ್, ಸಂತೋಷ್ ಕಪ್ಪೆಟ್ಟು, ಕೃಷ್ಣ ನೆರ್ಗಿ, ಮಂಜುನಾಥ್ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.