×
Ad

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ : ಉಡುಪಿ ಜಿಲ್ಲೆಯಾದ್ಯಂತ ಕಾರ್ಮಿಕರಿಂದ ಧರಣಿ, ಮೆರವಣಿಗೆ

Update: 2020-01-08 20:30 IST

ಉಡುಪಿ, ಜ.8: ಕಾರ್ಮಿಕ ಕಾನೂನುಗಳ ರಕ್ಷಣೆಗೆ ಆಗ್ರಹಿಸಿ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಮೆರವಣಿಗೆ, ಧರಣಿಯನ್ನು ನಡೆಸಲಾಯಿತು.

ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಆರಂಭಗೊಂಡ ಕಾರ್ಮಿಕರ ಮೆರ ವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸಮಾಪ್ತಿಗೊಂಡಿತು. ಅದೇ ರೀತಿ ಕುಂದಾಪುರ ಶಾಸ್ತ್ರೀ ವೃತ್ತದಿಂದ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಪಾದಯಾತ್ರೆ ನಡೆಸಿ, ಬಳಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಅಲ್ಲದೆ ಬೈಂದೂರು, ಕೋಟೇಶ್ವರ, ಅಮಾಸೆಬೈಲು, ವಂಡ್ಸೆ, ಗಂಗೊಳ್ಳಿ, ತಲ್ಲೂರು, ಹಾಲಾಡಿ, ಬಿದ್ಕಲ್‌ಕಟ್ಟೆ, ಸಾಲಿಗ್ರಾಮ, ಕಾರ್ಕಳ ಸೇರಿದಂತೆ ನಾನಾ ಕಡೆಗಳಲ್ಲಿ ಸಿಐಟಿಯು ಕಾರ್ಯಕರ್ತರು ಮುಷ್ಕರದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಬೆಂಬಲವಾಗಿ ಬ್ಯಾಂಕ್ ನೌಕರರ ಸಂಘ ಮತ್ತು ಅಧಿಕಾರಿಗಳ ಒಂದು ಸಂಘ ಹಾಗೂ ವಿಮಾ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು. ಆದರೆ ಬ್ಯಾಂಕ್, ಎಲ್‌ಐಸಿ ಕಚೇರಿಗಳು ತೆರೆದಿದ್ದವು. ಬಸ್ ಓಡಾಟ, ರಿಕ್ಷಾ ಸಂಚಾರ ಮತ್ತು ಅಂಗಡಿಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಕುಂದಾಪುರ ದಲ್ಲಿ ಒಂದು ಖಾಸಗಿ ಬಸ್ ಸಂಸ್ಥೆಯವರು ಬೆಂಬಲ ಸೂಚಿಸಿದ್ದರು ಎಂದು ಸಮಿತಿಯ ಸಂಚಾಲಕ ಕೆ.ಶಂಕರ್ ತಿಳಿಸಿದರು.

ವಿಭಜಿಸುವ ಪಿತೂರಿ: ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿ ಕೊಳ್ಳಲಾದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಚಾಲಕ ಕೆ.ಶಂಕರ್, ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನು ತುಂಡು ತುಂಡು ಮಾಡಿ ಮಾರಾಟ ಮಾಡಲು ಹೊರಟಿದೆ. ಧರ್ಮ, ಗಡಿ, ಭಾಷೆ ಆಧಾರದಲ್ಲಿ ನಮ್ಮನ್ನು ವಿಭಜಿಸಿ ಪಿತೂರಿ ನಡೆಸುತ್ತಿದೆ. ಕಾರ್ಮಿಕದ ಐಕ್ಯತೆಯನ್ನು ಮುರಿದು ಹಾಕುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.

ದೇಶದ ಕಾರ್ಮಿಕ ಸಂಘಟನೆ ಬಲಿಷ್ಠವಾಗಿದ್ದು, ನಮ್ಮ ಒಗ್ಗಟ್ಟು ಮುರಿಯಲು ಯಾರಿಗೂ ಸಾಧ್ಯವಿಲ್ಲ. ಈ ದೇಶ ಪ್ರಗತಿಯ ಹಾದಿಯಲ್ಲಿ ಸಾಗಬೇಕಾಗಿದೆ. ಕೈಗಾರಿಕೆ, ಕೃಷಿ ರಂಗ ಬೆಳೆಯಬೇಕು. ಆದರೆ ನಮ್ಮನ್ನು ಆಳುವವರಿಂದ ದೇಶದ ಆರ್ಥಿಕತೆ ಅಧೋಗತಿ ಹೋಗುತ್ತಿದೆ. ದೇಶದ ಈ ಪರಿಸ್ಥಿತಿಯಿಂದ ಮಧ್ಯಂತರ ಚುನಾವಣೆ ಆಗುವ ಸಾ್ಯತೆ ಇದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿಯ ದ.ಕ. ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಬಿಎಯ ರಾಮ್‌ಮೋಹನ್, ಬಿಇಎಫ್‌ಐಯ ರವೀಂದ್ರ, ವಿಮಾ ನೌಕರರ ಸಂಘದ ಪ್ರಭಾಕರ್ ಕುಂದರ್, ದಲಿತ ಮುಖಂಡ ಸುಂದರ್ ಮಾಸ್ತರ್ ಮಾತನಾಡಿದರು.
ಸಮಿತಿಯ ಸಹಸಂಚಾಲಕ ಕೆ.ವಿ.ಭಟ್, ಮಾಜಿ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ಶೇಖರ್ ಬಂಗೇರ, ಸುನಂದಾ, ನಳಿನಿ, ವಿಶ್ವನಾಥ ರೈ, ಕವಿರಾಜ್, ದಯಾನಂದ ಸಾಲ್ಯಾನ್, ಹೆರಾಲ್ಡ್ ಮೊದಲಾದವರು ಉಪಸ್ಥಿತರಿದ್ದರು.

ಗುಲಾಮಿ ಸರಕಾರ: ಸುರೇಶ್ ಕಲ್ಲಾಗರ್

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸರಕಾರ ಇಂದು ಅಧಿಕಾರವನ್ನು ನಡೆಸುತ್ತಿದೆ. ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕಾದ ಸರಕಾರ ಇಂದು ಅಂಬಾನಿ, ಅದಾನಿಯಂತಹ ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಬಂಡವಾಳಗಾರರ ಗುಲಾಮಿ ಸರಕಾರ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದ್ದಾರೆ.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬುಧವಾರ ಕುಂದಾ ಪುರದ ಶಾಸ್ತ್ರೀ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸೆಯಲ್ಲಿ ಅವರು ಮಾತನಾಡುತಿದ್ದರು.

ಕಾರ್ಮಿಕ ಮುಖಂಡ ಎಚ್.ನರಸಿಂಹ ಮಾತನಾಡಿ, ಕಾರ್ಮಿಕರ ಪರವಾದ ಕಾಯ್ದೆ, ಕಾನೂನುಗಳನ್ನು ರೂಪಿಸಬೇಕಾಗಿರುವ ಸರಕಾರ ಕಾರ್ಪೊರೇಟ್ ಕಂಪೆನಿಗಳ ಪರ ಕಾನೂನುಗಳನ್ನು ರೂಪಿಸಿ ಇಡೀ ದೇಶವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದೆಂದು ದೂರಿದರು.

ಪ್ರತಿಭಟನೆಯಲ್ಲಿ ಇಂಟಕ್ ಕುಂದಾಪುರ ತಾಲೂಕು ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಇಂಟಕ್‌ನ ಮಾಣಿ ಉದಯ್ ಕುಮಾರ್, ಸಿಐಟಿಯುನ ಮಹಾಬಲ ವಡೇರ ಹೋಬಳಿ, ರಾಜು ದೇವಾಡಿಗ, ರವಿ ಎಂ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News