ಅದಮಾರು ಸ್ವಾಮೀಜಿಯಿಂದ ಕಾಲ್ನಡಿಗೆಯಲ್ಲಿಯೇ ಪುರಪ್ರವೇಶ
ಉಡುಪಿ, ಜ.8: ಈ ಬಾರಿಯ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠವನ್ನು ಏರಲಿರುವ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಸಂಚಾರವನ್ನು ಮುಗಿಸಿ ಇಂದು ಪುರಪ್ರವೇಶ ಮಾಡಿದರು.
ಸಾಂಪ್ರದಾಯಿಕ ಪರ್ಯಾಯ ಸಂಚಾರ ಪೂರೈಸಿ, ಅದಮಾರು ಮೂಲ ಮಠದಿಂದ ಆಗಮಿಸಿದ ಶ್ರೀಈಶಪ್ರೀಯ ತೀರ್ಥ ಸ್ವಾಮೀಜಿಯನ್ನು ನಗರದ ಜೋಡುಕಟ್ಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಹಾಗೂ ಶ್ರೀಕೃಷ್ಣ ಸೇವಾ ಬಳಗದವರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಬಳಿಕ ಅವರು ಜೋಡುಕಟ್ಟೆಯಲ್ಲಿ ಪಟ್ಟದ ದೇವರು ಕಾಳಿಯ ಮರ್ಧನ ಕೃಷ್ಣನಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯನ್ನು ವೀಕ್ಷಿಸಿದರು. ಮೆರವಣಿಗೆಯು ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿ ತಲುಪಿತು.
ಇದರೊಂದಿಗೆ ಸ್ವಾಮೀಜಿ ಅಲಂಕೃತ ವಾಹನದ ಬದಲು ಕಾಲ್ನಡಿಗೆಯಲ್ಲೇ ರಥಬೀದಿಗೆ ಸಾಗಿಬಂದರು. ಅಲ್ಲಿ ಚಂದ್ರವೌಳ್ವೇಶರ, ಅನಂತೇಶ್ವರ ದೇವಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಸ್ವಾಮೀಜಿ, ನಂತರ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದರು.
ಮೆರವಣಿಗೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಳಗದ ಅಧ್ಯಕ್ಷ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾದ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅವರು ಸಂಜೆ 5:55ರ ಶುಭ ಮುಹೂರ್ತದಲ್ಲಿ ಕಾಳೀಯಮರ್ದನ ಕೃಷ್ಣನೊಂದಿಗೆ ಅಧಿಕೃತವಾಗಿ ಅದಮಾರು ಮಠವನ್ನು ಪ್ರವೇಶಿಸಿದರು.
ಗಮನ ಸೆಳೆದ ಮೆರವಣಿಗೆ: ಈ ಬಾರಿಯ ಮೆರವಣಿಗೆಯಲ್ಲಿ ಯಾವುದೇ ಸ್ತಬ್ಧಚಿತ್ರಗಳು ಇರಲಿಲ್ಲ. ಅದರ ಬದಲು ಅದಮಾರು ಮಠದ ಅಧೀನದಲ್ಲಿ ರುವ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಸಂಧ್ಯಾ ಕಾಲೇಜು ಮತ್ತು ಅದ ಮಾರು ಪೂರ್ಣಪ್ರಜ್ಞ ಕಾಲೇಜುಗಳ ಸುಮಾರು 3500 ವಿದ್ಯಾರ್ಥಿಗಳೇ ವಿವಿಧ ಕಲೆಗಳನ್ನು ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು.
ಚಿಲಿಪಿಲಿ ಗೊಂಬೆ, ಪಂಚ ವಾದ್ಯ, ನಾಗಸ್ವರ, ವಿದ್ಯಾರ್ಥಿಗಳಿಂದ ಪೂರ್ಣ ಕುಂಭ, ಹುಲಿವೇಷ, ದಾಂಡಿಯಾ, ಚಂಡೆ ಸಹಿತ ಕೋಲಾಟ, ಕೊಡೆ ಕುಣಿತ, ಕಂಗೀಲು, ತಾಲೀಮು, ಎನ್‌ಸಿಸಿ ರೇಂಜರ್ಸ್, ಗಣೇಶ ನೃತ್ಯ, ಕೋಲಾಟ, ಗರ್ಭಾ, ಬಾಂಗ್ಡಾ, ನೃತ್ಯ ಭಜನೆ, ಕಂಸಾಳೆ, ಕಥಕ್ಕಳಿ, ಮಣಿಪುರಿ, ಚಂಡೆ ವಾದನ, ಕೃಷ್ಣ ಗೋಪಿಕೆಯರು, ಭಜನೆ ಸಂಕೀರ್ತನೆ, ಕುಡುಬಿ, ಕುದುರೆ, ಮೂರು ಒಂಟೆ ಗಮನ ಸೆಳೆದವು.
ಅದೇ ರೀತಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ಪರಿಸರ, ಪ್ಲಾಸ್ಟಿಕ್ ಬಳಕೆ ನಿಷೇಧ, ಮಳೆಕೊಯ್ಲು, ಸ್ವಚ್ಛ ಭಾರತ, ಮರಗಳನ್ನು ಬೆಳೆಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಮೆರವಣಿಗೆಯ ಕೊನೆಯಲ್ಲಿ ಸಾಗಿಬಂದ ಪಿಪಿಸಿಯ ವಿದ್ಯಾರ್ಥಿಗಳು ಮತ್ತು ಪೌರ ಕಾರ್ಮಿಕರು ಕಸಗಳನ್ನು ಹೆಕ್ಕುತ್ತ ರಸ್ತೆ ಯನ್ನು ಸ್ವಚ್ಛಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.
ಉಡುಪಿ ಕೋರ್ಟ್ ಎದುರು ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೇಜಾವರ ಶ್ರೀ ಮುಸ್ಲಿಮ್ ಅಭಿಮಾನಿ ಬಳಗದವರಿಂದ ತಂಪು ಪಾನೀಯವನ್ನು ವಿತರಿಸಲಾಯಿತು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಗದೀಶ್, ಎಸ್ಪಿ ವಿಷ್ಣುವರ್ಧನ್, ಸಿಇಓ ಪ್ರೀತಿ ಗೆಹ್ಲೋಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಮೆರವಣಿಗೆಯನ್ನು ವೀಕ್ಷಿಸಿದರು.