×
Ad

'ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಗಳಿಂದ ಸರ್ವ ಭಾರತೀಯರಿಗೆ ಅವಮಾನ'

Update: 2020-01-08 20:40 IST

ಮಂಗಳೂರು, ಜ.8: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಸಮರ್ಪಕ ಆರ್ಥಿಕ ನೀತಿಯಿಂದ ದೇಶದ ಜನತೆ ಕಂಗೆಟ್ಟಿರುವಾಗ ಅವನ್ನೆಲ್ಲಾ ಮರೆಮಾಚಲು ಪೌರತ್ವ ಸಂಬಂಧಪಟ್ಟ ಕಾಯ್ದೆಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವುದು ಸರ್ವ ಭಾರತೀಯರು ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ದೇಶದ ಮಾನವ ಸಂಪನ್ಮೂಲಕ್ಕೆ ಕೊಡಲಿಯೇಟು ನೀಡಲಿರುವ ಈ ಕಾಯ್ದೆಯು ಮತೀಯ ಘರ್ಷಣೆ ಹುಟ್ಟು ಹಾಕಿ ದೇಶ ವಿಭಜನೆಯಾಗುವ ಅಪಾಯವನ್ನು ಆತಂಕವನ್ನು ತಂದೊಡ್ಡಿದೆ. ಪೌರತ್ವಕ್ಕೆ ಸಂಬಂಧಪಟ್ಟ ಇಂತಹ ಜನವಿರೋಧಿ ಕಾಯ್ದೆಗಳನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಮಂಗಳೂರು ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಅಮಾಯಕರಿಗೆ ಮುಖ್ಯಮಂತ್ರಿ ಘೋಷಿಸಿದ ಪರಿಹಾರವನ್ನು ತಡೆದಿರುವ ಕ್ರಮ ಅಮಾನವೀಯ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಗಲಭೆಯ ಸಂದರ್ಭ ವೇಷಧಾರಿ ಪೊಲೀಸರಿರುವ ಶಂಕೆವ್ಯಕ್ತವಾಗಿದೆ. ಮೇಲ್ನೋಟಕ್ಕೆ ಸರಕಾರಿ ಪ್ರಾಯೋಜಿತ ಕೃತ್ಯವೆಂಬಂತೆ ಗೋಚರಿಸುತ್ತಿದೆ. ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವಲ್ಲಿಯವರೆಗೂ ಕಾಂಗ್ರೆಸ್‌ನ ಹೋರಾಟ ಮುಂದುವರಿಯುತ್ತದೆ ಎಂದ ಹರೀಶ್ ಕುಮಾರ್ ಪೌರತ್ವ ವಿಚಾರವಾಗಿ ಮನೆ ಭೇಟಿ ಬಂದವರಿಗೆ ಅಸಹಕಾರ ನೀಡುವಂತೆ ಕರೆ ನೀಡಿದೆ ಎಂದರು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಪೇಜಾವರ ಸ್ವಾಮೀಜಿಗೆ ಸಂತಾಪ ಸೂಚಿಸಲಾಯಿತು. ಅಸಂವಿಧಾನಿಕ ಹೇಳಿಕೆ ನೀಡುತ್ತಿರುವ ಬಿಜೆಪಿಯ ಸೋಮಶೇಖರ ರೆಡ್ಡಿ, ಸಿ.ಟಿ ರ, ಸುರೇಶ್ ಅಂಗಡಿ ಮತ್ತಿತರರ ನಡೆಯನ್ನು ಖಂಡಿಸಲಾಯಿತು.

ವಿಧಾನಪರಿಷತ್ತು ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಪಕ್ಷದ ಮುಖಂಡರಾದ ಭರತ್ ಮುಂಡೊಡಿ, ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಎ.ಸಿ ವಿನಯರಾಜ್, ಹಾಜಿ ಟಿ.ಎಸ್ ಅಬ್ದುಲ್ಲಾ, ಶಾಹುಲ್ ಹಮೀದ್, ವೆಂಕಪ್ಪಗೌಡ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮುಹಮ್ಮದ್ ಬಡಗನ್ನೂರು, ಮುಹಮ್ಮದ್ ಅಲಿ, ಸದಾಶಿವ ಶೆಟ್ಟಿ, ಉಮ್ಮರ್ ಫಜೀರ್, ನಝೀರ್ ಬಜಾಲ್, ನೀರಜ್‌ಪಾಲ್, ಸಿ.ಎಂ. ಮುಸ್ತಫ, ಟಿ.ಕೆ. ಸುಧೀರ್, ಖಾಲಿದ್ ಉಜಿರೆ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News