ಯಾರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು: ದೀಪಿಕಾ ಬಗ್ಗೆ ಪ್ರಕಾಶ್ ಜಾವಡೇಕರ್
ಹೊಸದಿಲ್ಲಿ, ಜ. 8: ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಮುಂಬರುವ ಸಿನೆಮಾ ‘ಚಪಾಕ್’ ಬಹಿಷ್ಕರಿಸುವಂತೆ ಕರೆ ನೀಡಿರುವ ನಡುವೆ, ಬುಧವಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಲಾವಿದರು ಮಾತ್ರವಲ್ಲ ಸಾಮಾನ್ಯ ಜನರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಎಲ್ಲಿಗೆ ಕೂಡ ಹೋಗಬಹುದು. ಇದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದಿದ್ದಾರೆ.
ದೀಪಿಕಾ ಪಡುಕೋಣೆ ಅವರ ಸಿನೆಮಾ ಬಹಿಷ್ಕರಿಸಬೇಕೆಂದು ಬಿಜೆಪಿಯ ಕೆಲವು ನಾಯಕರು ಕರೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಜಾವಡೇಕರ್, “ದೀಪಿಕಾ ಪಡುಕೋಣೆ ಹೇಳಿಕೆ ನೀಡಿರುವುದನ್ನು ನಾನು ಓದಿಲ್ಲ” ಎಂದರು.
‘‘ತುಕ್ಡೆ ತುಕ್ಡೆ ಗ್ಯಾಂಗ್’’ಗೆ ಬೆಂಬಲಿಸಿದ ದೀಪಿಕಾ ಪಡುಕೋಣೆ ಅವರ ‘ಚಪಾಕ್’ ಚಿತ್ರವನ್ನು ಬಹಿಷ್ಕರಿಸುವಂತೆ ದಕ್ಷಿಣ ದಿಲ್ಲಿಯ ಬಿಜೆಪಿ ಸಂಸದ ರಮೇಶ್ ಬಿದುರಿ ಜನರಲ್ಲಿ ಮನವಿ ಮಾಡಿದ್ದರು. ‘‘ಚಿತ್ರಕ್ಕೆ ಬದಲಾಗಿ ದೇಶದ ವಿರುದ್ಧವಾಗಿರುವವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ದೇಶದ ಯುವ ಜನಾಂಗಕ್ಕೆ ನಕಾರಾತ್ಮಕ ಸಂದೇಶ ನೀಡಲು ದೀಪಿಕಾ ಪಡುಕೋಣೆ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ’’ ಎಂದು ಬಾದುರಿ ಹೇಳಿದ್ದರು.
ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕ್ಯಾಂಪಸ್‌ನಲ್ಲಿ ರವಿವಾರ ರಾತ್ರಿ ನಡೆದ ದಾಳಿಯಿಂದ ಗಂಭೀರ ಗಾಯಗೊಂಡ ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್ ಅವರೊಂದಿಗೆ ಮೌನವಾಗಿ ನಿಂತ ದೀಪಿಕಾ ಪಡುಕೋಣೆ ಅವರ ನಿರ್ಧಾರವನ್ನು ಉದ್ಯಮದ ಹಾಗೂ ಹೊರಗಿನವರು ಪ್ರಶಂಸಿಸಿದ್ದರು. ಆದರೆ, ಕೆಲವರು ಅವರ ‘ಚಪಾಕ್’ ಬಹಿಷ್ಕರಿಸಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆರಂಭಿಸಿದ್ದರು. ತಮಗೆ ಬೆಂಬಲ ವ್ಯಕ್ತಪಡಿಸಿದ ದೀಪಿಕಾ ಪಡುಕೋಣೆ ಪರವಾಗಿ ಜೆಎನ್‌ಯುಎಸ್‌ಯು ಹೇಳಿಕೆ ಬಿಡುಗಡೆ ಮಾಡಿದೆ. ‘‘ದೀಪಿಕಾ ಪಡುಕೋಣೆ ವಿರುದ್ಧ ದ್ವೇಷ ಕಾರುತ್ತಿರುವುದನ್ನು ನಾವು ವಿರೋಧಿಸುತ್ತೇವೆ. ಸಮಾಜದಲ್ಲಿ ನಾವೆಲ್ಲಿ ಇದ್ದೇವೆ ಎಂಬದು ದುಃಖದ ವಿಚಾರ. ಜೆಎನ್‌ಯುನಲ್ಲಿ ಗಾಯಗೊಂಡ ಹಾಗೂ ಬೆದರಿಕೆಗೆ ಒಳಗಾದ ವಿದ್ಯಾರ್ಥಿಗಳ ಜೊತೆ ದೀಪಿಕಾ ಪಡುಕೋಣೆ ನಿಂತರು. ಇದು ಮಾನವ ಕಾಳಜಿ. ನಾವು ಅವರಿಗ ಕೃತಜ್ಞತೆ ಸಲ್ಲಿಸುತ್ತೇವೆ’’ ಎಂದು ಹೇಳಿಕೆಯಲ್ಲಿ ತಿಳಿಸಿದೆ.