ಕುತ್ತಾರು: ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ
ಉಳ್ಳಾಲ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಪ್ರಯುಕ್ತ ಬುಧವಾರ ಡಿವೈಎಫ್‍ಐ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಕುತ್ತಾರು ಜಂಕ್ಷನ್‍ನಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಿ ಪ್ರದಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹನ ಮಾಡಿ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಡಿವೈಎಫ್‍ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮಾತನಾಡಿ, ಎರಡನೇ ಅವಧಿಯಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೂ ಸಮರ್ಪಕ ಆಡಳಿತ ನೀಡುತ್ತಿಲ್ಲ. ಮೋದಿಯವರ ಎಲ್ಲಾ ಕಾನೂನುಗಳು ಶ್ರೀಮಂತರ ಪರವಾಗಿದ್ದು, ಕಾರ್ಮಿಕರ ಪರವಾಗಿ ಜಾರಿಯಾಗುತ್ತಿಲ್ಲ. ಸರಕಾರದ ಈ ಧೋರಣೇಯನ್ನು ವಿರೋಧಿಸಿ ಕಾರ್ಮಿಕರು ತಮ್ಮ ದುಡಿಮೆಯನ್ನು ಮೊಟಕುಗೊಳಿಸಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ. 1991ರಿಂದ 2020ರವರೆಗೆ 19 ಬಾರಿ ಮುಷ್ಕರ ನಡೆದಿದ್ದು ನಾಡಿನ ದುರಂತ ಎನ್ನಲೇಬೇಕು .ವಿಮಾನ ನಿಲ್ದಾಣ, ರೈಲು ಖಾಸಗೀಕರಣ, ಬ್ಯಾಂಕ್‍ಗಳನ್ನು ಗುಜರಾತಿನ ಮಾರ್ವಾಡಿಗಳ ಬ್ಯಾಂಕ್‍ಗಳೊಂದಿಗೆ ವಿಲೀನ ಮಾಡುವ ಮೂಲಕ ನಿರೋದ್ಯೋಗಕ್ಕೆ ಕಾರಣವಾಗುತ್ತಿದೆ ಎಂದ ಅವರು ನರೇಂದ್ರ ಮೋದಿಯ ಒಡೆದಾಳುವ ಹಿಟ್ಲರ್ ನೀತಿಯನ್ನು ಎದುರಿಸಲು ದೇಶದಾದ್ಯಂತ ಜನರು ಒಂದಾಗಿ ಹೋರಾಟ ನಡೆಸುತ್ತಿದೆ. ಪೌರತ್ವ ವಿರೋಧಿ ಕಾಯಿದೆಯನ್ನು ಎದುರಿಸಲು ಎಡಪಂಥೀಯ ಸಂಘಟನೆಗಳು ಮುಂಚೂಣಿಯಲಲಿ ನಿಂತು ಹೋರಾಟ ನಡೆಸುತ್ತಿದೆ ಎಂದರು.
ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ ಜನರಿಂದ ನಿರ್ಮಾಣ ಮಾಡಿದ ಸರಕಾರ ಜನಪರವಾಗದೆ ಜನರಿಗೆ ಕಿರುಕುಳ ನೀಡುವ ಮೂಲಕ ಜನರನ್ನು ಹತ್ತಿಕ್ಕಿವ ಕಾರ್ಯವನ್ನು ಮಾಡುತ್ತಿದೆ ಎಂದರು.
ಸಭೆಯಲ್ಲಿ ಸಿಪಿಐಎಂ ಮುಖಂಡರಾದ ಮಹಾಬಲ ದೆಪ್ಪಲಿಮಾರ್, ಇಬ್ರಾಹಿಂ ಮದಕ, ಪಂಚಾಯತ್ ಸದಸ್ಯರಾದ ಗಣೇಶ್ ಟೈಲರ್ , ಕಾರ್ಮಿಕ ಮುಖಂಡ ಜನಾರ್ದನ್ ಕುತ್ತಾರ್ , ಡಿವೈಎಫ್‍ಐ ಮುಖಂಡರಾದ ರಝಕ್ ಮೊಂಟೆಪದವು , ಭರತ್ ಕುತ್ತಾರ್ , ಸಂಕೇತ್ ಕಂಪ ಉಪಸ್ಥಿತರಿದ್ದರು. ನಿತಿನ್ ಕುತ್ತಾರ್ ಸ್ವಾಗತಿಸಿದರೆ ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ತೇವುಲ ವಂದಿಸಿದರು.