×
Ad

‘ಜಿಲ್ಲೆಯ ಕಂದಾಯ ಅಧಿಕಾರಿಗಳು ಇನ್ನು ಜನರ ಮನೆಬಾಗಿಲಿಗೆ’

Update: 2020-01-08 21:47 IST

ಉಡುಪಿ, ಜ.8: ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಇನ್ನು ಮುಂದೆ ಜಿಲ್ಲೆಯ ಕಂದಾಯ ಅಧಿಕಾರಿಗಳು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಹಳ್ಳಿಗಳಿಗೆ ತೆರಳಿ, ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವ, ಇಲಾಖೆ ವತಿಯಿಂದ ಜನರ ಮನೆ ಬಾಗಿಲಿಗೇ ಸೌಲ್ಯ ಮುಟ್ಟಿಸುವ ‘ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ’ ಎಂಬ ವಿನೂತನ ಕಾರ್ಯಕ್ರಮವನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ಉಡುಪಿಯ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪ ವಿಬಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಪ್ರತಿ ತಿಂಗಳಲ್ಲಿ ಒಂದು ದಿನ ಬೆಳಗ್ಗೆ 9ರಿಂದ ಸಂಜೆ 5:00ಗಂಟೆಯವರೆಗೆ ಹಳ್ಳಿಗಳಲ್ಲಿ ಕೆಲಸ ಮಾಡಬೇಕಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬಾಕಿ ಇರುವ ಗ್ರಾಮಗಳ ಸಾರ್ವಜನಿಕರ ಅರ್ಜಿಗಳನ್ನು ಅವರ ಮನೆ ಬಾಗಿಲಿಗೇ ತೆರಳಿ, ಸಮಸ್ಯೆ ಆಲಿಸಿ, ಸ್ಥಳದಲ್ಲೇ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು, ಚರ್ಚಿಸಿ ಶೀಘ್ರವೇ ಕಾರ್ಯಕ್ರಮದ ರೂಪುರೇಷೆಗನ್ನು ಅಂತಿಮಗೊಳಿಸಿ ರಾಜ್ಯಾದ್ಯಂತ ಅನುಷ್ಠಾನ ಗೊಳಿಸ ಲಾಗುವುದು ಎಂದು ಆಶೋಕ್ ನುಡಿದರು.

ರಾಜ್ಯದಲ್ಲಿ ಪ್ರತಿ ವರ್ಷ ಪಿಂಚಣಿ ಯೋಜನೆಗಾಗಿ ತಮ್ಮ ಇಲಾಖೆ 7,500 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಈ ಯೋಜನೆಗಳು ಕೆಲವು ಅನರ್ಹರ ಪಾಲಾಗುತ್ತಿರುವುದನ್ನು ತಪ್ಪಿಸಲು ಫಲಾನುಭವಿಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತಿದೆ. ಇದರಿಂದ ಅನರ್ಹರ ಪಾಲಾಗುತ್ತಿರುವ 800ರಿಂದ 900 ಕೋಟಿ ರೂ. ಉಳಿತಾಯವಾಗಲಿದೆ ಎಂದೂ ಅವರು ಹೇಳಿದರು.

ಅಲ್ಲದೇ ಆಧಾರ್‌ನಲ್ಲಿರುವ ಜನ್ಮ ದಿನಾಂಕ ದಾಖಲೆ ಬಳಸಿಕೊಂಡು 60 ವರ್ಷ ಪ್ರಾಯ ಮೀರಿದ ಅರ್ಹ ವೃದ್ಧರ ಮನೆ ಬಾಗಿಲಿಗೇ ತೆರಳಿ, ಅರ್ಜಿ ಇಲ್ಲದೇ ಪಿಂಚಣಿ ಮಂಜೂರು ಮಾಡುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಪೈಲಟ್ ಯೋಜನೆ ಜಾರಿಗೊಳಿಸಿ 2,000 ಫಲಾನುವಿಗಳನ್ನು ಗುರುತಿಸ ಲಾಗಿದೆ. ಶೀಘ್ರದಲ್ಲಿ ಅವರ ಮನೆ ಬಾಗಲಿಗೆ ತೆರಳಿ ಪಿಂಚಣಿ ಮಂಜೂರು ಮಾಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

ಅಲ್ಲದೇ ರಾಜ್ಯದ ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಾಣಕ್ಕಾಗಿ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ರಾಜ್ಯದಲ್ಲಿ ಬಾಕಿ ಇರುವ ಶವ ಸಂಸ್ಕಾರ ಪರಿಹಾರದ ಮೊತ್ತ 70 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

ಉಡುಪಿಗೆ ಇನ್ನೊಂದು ಉಪವಿಭಾಗ:  ಉಡುಪಿ ಜಿಲ್ಲೆಯಲ್ಲಿ ಈಗ ಕುಂದಾಪುರದಲ್ಲಿ ಕಂದಾಯ ಉಪವಿಭಾಗವಿದ್ದು, ಇದರಿಂದ ಎಲ್ಲಾ ತಾಲೂಕು ಗಳ ಸಾರ್ವಜನಿಕರು ಅಲ್ಲಿಗೇ ತೆರಳುವುದಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು, ಉಡುಪಿ, ಕಾರ್ಕಳ ಶಾಸಕರ ಮನವಿ ಮೇರೆಗೆ ಉಡುಪಿಯಲ್ಲಿ ಇನ್ನೊಂದು ಕಂದಾಯ ಉಪ ವಿಭಾಗವನ್ನು ತೆರೆಯಲಾಗುವುದು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಮಿನಿ ವಿಧಾನಸೌಧದ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಉದ್ಘಾಟಿಸಿದರು. ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ರಾಜ್ಯದ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ವಿ.ಸುನೀಲ್ ಕುಮಾರ್, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಬಾಗಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರೆ, ಉಡುಪಿ ಕಂದಾಯ ಪರಿವೀಕ್ಷಕ ವಿಶ್ವನಾಥ ವಂದಿಸಿದರು. ಕುದಿ ವಸಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರೆ, ಉಡುಪಿ ಕಂದಾಯ ಪರಿವೀಕ್ಷಕ ವಿಶ್ವನಾಥ ವಂದಿಸಿದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News