×
Ad

ಜೆಎನ್‌ಯು ವಿದ್ಯಾರ್ಥಿಗಳಿಗೆ ಹಲ್ಲೆ : ನ್ಯಾಷನಲ್ ವುಮೆನ್ಸ್ ಫ್ರಂಟ್ ಖಂಡನೆ

Update: 2020-01-08 22:10 IST

ಮಂಗಳೂರು, ಜ.8: ದೆಹಲಿಯ ಜವಾಹರ್ಲಾಲ್ ವಿವಿಯ ಆವರಣದೊಳಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಲ್ಲದೆ ಕಾಲೇಜಿನ ಪೀಠೋಪಕರಣಗಳನ್ನು ಧ್ವಂಸಗೈದು ಗೂಂಡಾ ವರ್ತನೆ ತೋರಿದ ಘಟನೆಯನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಸಾವಿರ ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಜೆಎನ್‌ಯು ಕ್ಯಾಂಪಸಿನ ಪ್ರತಿಯೊಂದು ಗೇಟಿನಲ್ಲಿರುವ ಭದ್ರತಾ ಸಿಬ್ಬಂದಿಗಳು ಗೇಟಿನ ಮೂಲಕ ಹಾದು ಹೋಗುವ ವಾಹನಗಳು ಮತ್ತು ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕಾಗಿತ್ತು. ಹಾಗಿರುವಾಗ ಶಸ್ತ್ರ ಸಜ್ಜಿತವಾಗಿ ಐವತ್ತು ಮಂದಿಯ ಗೂಂಡಾ ಪಡೆ ಒಳನುಗ್ಗುವಾಗ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆಯ ದಿರುವುದು ವಿಪರ್ಯಾಸ. ಕಾಲೇಜಿನ ಸುತ್ತಮುತ್ತಲು ಮಧ್ಯಾಹ್ನವೇ ಕೆಲವು ಯುವಕರು ಸಂಶಯಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾಕಾಗಿ ಪೊಲೀಸರು ಕಾಲೇಜಿಗೆ ಹೆಚ್ಚಿನ ಭದ್ರತೆ ನೀಡಿಲ್ಲ ಎಂದು ಎನ್‌ಡಬ್ಲುಎಫ್ ಆಪಾದಿಸಿದೆ.

ಈ ಗೂಂಡಾ ಪಡೆಯು ಎಬಿವಿಪಿ ನಂಟು ಹೊಂದಿರುವ ವಿದ್ಯಾರ್ಥಿಗಳ ಕೊಠಡಿಗಳನ್ನು ಹೊರತುಪಡಿಸಿ ಮುಸ್ಲಿಂ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳನ್ನೆ ಟಾರ್ಗೆಟ್ ಮಾಡಿಕೊಂಡು ದ್ವಂಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಜೆಎನ್‌ಯು ಅಧ್ಯಕ್ಷೆ ಐಶ್ ಘೋಷ್ ಈ ಗೂಂಡಾಗಳಿಂದ ತೀವ್ರವಾದ ಹಲ್ಲೆಯಾಗಿರುವುದಲ್ಲದೆ ಅವರ ಮೇಲೆಯೇ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ. ಈ ಎಲ್ಲಾ ಘಟನೆಗಳನ್ನು ಅವಲೋಕಿಸುವಾಗ ಸಂಘಪರಿವಾರದ ಎಬಿವಿಪಿ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಪೂರ್ವಯೋಜಿತವಾಗಿ ನಡೆಸಿದ ಕೃತ್ಯವೆಂದು ಎನ್‌ಡಬ್ಲುಎಫ್ ಆಪಾದಿಸಿದೆ.

ಆದ್ದರಿಂದ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಘಟನೆಯಲ್ಲಿ ನೇರವಾಗಿ ಭಾಗಿಯಾದ ಎಲ್ಲಾ ತಪ್ಪಿತಸ್ಥರ ಮೇಲೂ ಮತ್ತು ಪರೋಕ್ಷವಾಗಿ ಸಹಕರಿಸಿದ ಪೊಲೀಸ್ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News