×
Ad

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಸುದ್ದಿಗೋಷ್ಠಿಗೆ ಅವಕಾಶ ನಿರಾಕರಣೆ: ಎಸ್‌ಡಿಪಿಐ ಖಂಡನೆ

Update: 2020-01-08 22:30 IST

ಮಂಗಳೂರು, ಜ.8: ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ ನ್ಯಾಯಮೂರ್ತಿ ಗೋಪಾಲ ಗೌಡ ನೇತೃತ್ವದ ಸತ್ಯಶೋಧನ ಸಮಿತಿಯು ನಡೆಸಿದ ಜನತಾ ಅದಾಲತ್ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಸಂಕ್ಷಿಪ್ತ ವಿವರಣೆಯನ್ನು ಸುದ್ದಿಗೋಷ್ಠಿ ಮೂಲಕ ಮಾಧ್ಯಮಕ್ಕೆ ನೀಡಲು ಪೊಲೀಸರು ಅವಕಾಶ ನಿರಾಕರಿಸಿರುವುದು ಖಂಡನೀಯ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಈ ತಂಡವು ಘಟನೆಯ ಪ್ರತ್ಯಕ್ಷದರ್ಶಿಗಳಿಂದ, ಪೊಲೀಸರಿಂದ ಹಲ್ಲೆಗೊಳಗಾದವರಿಂದ, ಗುಂಡೇಟು ತಗಲಿದವರಿಂದ ಹಾಗೂ ಸಾರ್ವಜನಿಕರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಅದಕ್ಕೆ ಕೂಡ ಪೊಲೀಸರು ಅಡ್ಡಿಪಡಿಸಲು ಯತ್ನಿಸಿದ್ದರು. ಈ ಎಲ್ಲಾ ಘಟನೆಗಳ ಸಂಕ್ಷಿಪ್ತ ವರದಿಯನ್ನು ದೇಶದ ಜನತೆಯ ಮುಂದಿಡುವ ಸಲುವಾಗಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಆದರೆ ಮಂಗಳೂರು ಪೊಲೀಸರು ವರದಿಯನ್ನು ಬಿಡುಗಡೆಗೊಳಿಸಲು ತಡೆಯೊಡ್ಡುವ ಸಲುವಾಗಿ ಹೊಟೇಲ್‌ಗಳಲ್ಲಿ ಕೊಠಡಿ ನೀಡದಂತೆ ಒತ್ತಡ ಹೇರಿದ್ದು ದಿಗ್ಭ್ರಮೆ ಮೂಡಿಸಿದೆ. ಸುಪ್ರೀಂ ಕೋಟ್‌ನ ನಿವೃತ್ತ ನ್ಯಾಯಾಧೀಶರಿಗೆ ಸುದ್ದಿಕಾಗೋಷ್ಠಿಗೆ ಅವಕಾಶ ನೀಡದ ಮಂಗಳೂರು ಪೊಲೀಸರು ಈ ಜಿಲ್ಲೆಯನ್ನು ಪೊಲೀಸ್ ರಾಜ್ಯ ಮಾಡಲು ಹೊರಟಂತೆ ಭಾಸವಾಗುತ್ತದೆ. ಘಟನೆ ನಡೆದ ದಿನದಂದು ಬಸ್ಸಿಗೆ ಕಾಯುತ್ತಿದ್ದ ದಂಪತಿಯ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ನೀಡಿದ ದೂರನ್ನು ಸ್ವೀಕರಿಸದೆ ಇರುವುದಲ್ಲದೆ ಆ ದಂಪತಿಯ ವಿರುದ್ದವೇ ಎಫ್‌ಐಆರ್ ದಾಖಲು ಮಾಡುವ ಬೆದರಿಕೆಯನ್ನು ಹಾಕಿರುವುದು ಖಂಡನೀಯ. ಘಟನೆಯ ನಂತರ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದೆ.

ಘಟನೆಯಲ್ಲಿ ಪೊಲೀಸರ ವೈಫಲ್ಯ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿಮರ್ಶಿಸಿದ ಯುವಕರ ಮೇಲೆ ನೋಟಿಸ್ ನೀಡುತ್ತಿರುವುದು ಹಾಗೂ ಎಡಿಜಿಪಿ ಮಂಗಳೂರು ಘಟನೆಯಲ್ಲಿ ಪೊಲೀಸರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪತ್ರಿಕೆಯಲ್ಲಿ ಬಹಿರಂಗ ಪಡಿಸಿದ್ದಕ್ಕೆ ಪತ್ರಿಕೆಗಳಿಗೆ ನೋಟಿಸ್ ಜಾರಿ ಮಾಡುವ ಬೆದರಿಕೆ ಹಾಕಿದ್ದೆಲ್ಲವೂ ಕಾಶ್ಮೀರದ ಸದ್ಯದ ವಾತಾವರಣವನ್ನು ನೆನಪಿಸುತ್ತದೆ. ಹಾಗಾಗಿ ಈ ಘಟನೆಯ ನೈಜ ರುವಾರಿಗಳಾದ ಪೊಲೀಸರನ್ನು ತಕ್ಷಣ ವಜಾಗೊಳಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಎಸ್‌ಎಚ್ ಆಗ್ರಹಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಕಮಿಟಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡ ಮತ್ತವರ ತಂಡಕ್ಕೆ ಸುದ್ದಿಗೋಷ್ಠಿ ನಡೆಸಲು ಅವಕಾಶ ನಿರಾಕರಿಸಿರುವ ಪೊಲೀಸರ ನಡೆ ಖಂಡನೀಯ. ಇದು ಸುಪ್ರೀಂ ಕೋರ್ಟ್‌ಗೆ ಮಂಗಳೂರು ಪೊಲೀಸ್ ಆಯುಕ್ತರು ಮಾಡಿರುವ ಅವಮಾನವಾಗಿದೆ. ಪೊಲೀಸ್ ಆಯುಕ್ತರು ತನ್ನ ಸ್ಥಾನದ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ದೇಶಕ್ಕೊಂದು ಸಂವಿಧಾನವಿದೆ, ಕಾನೂನು ಇದೆ ಎಂಬ ಪ್ರಜ್ಞೆಯನ್ನು ಅರಿತು ಆಯುಕ್ತರು ಸಮಾಜದ ಸರ್ವರನ್ನೂ ಸಮಾನವಾಗಿ ಕಾಣುವ ಪ್ರಯತ್ನವನ್ನು ಮಾಡಬೇಕಿದೆ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಮುಖಂಡ ಅಲಿ ಹಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News