ಬಾಗ್ದಾದ್: ರಾಯಭಾರಿ ಕಚೇರಿ ಪ್ರದೇಶಕ್ಕೆ ಅಪ್ಪಳಿಸಿದ ರಾಕೆಟ್

Update: 2020-01-09 03:42 GMT

ಬಾಗ್ದಾದ್: ಇರಾಕ್ ರಾಜಧಾನಿಯಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿರುವ ಹಸಿರು ವಲಯದ ಮೇಲೆ ಬುಧವಾರ ತಡರಾತ್ರಿ ಎರಡು ರಾಕೆಟ್ ದಾಳಿ ನಡೆದಿವೆ. ಇದೇ ಪ್ರದೇಶದಲ್ಲಿ ಯುಎಸ್ ಮಿಷಿನ್ ಕಚೇರಿಯೂ ಇದ್ದು, ತಕ್ಷಣಕ್ಕೆ ಹಾನಿಯ ವಿವರಗಳು ಲಭ್ಯವಾಗಿಲ್ಲ.

ಮಧ್ಯರಾತ್ರಿ ವೇಳೆ ಎರಡು ದೊಡ್ಡ ಸ್ಫೋಟಗಳ ಸದ್ದು ಕೇಳಿಸಿದ್ದು, ತಕ್ಷಣ ಹಸಿರು ವಲಯದಲ್ಲಿ ಭದ್ರತಾ ಪಡೆಗಳ ಸೈರನ್‌ಗಳು ಮೊಳಗಿದ್ದು ಕೇಳಿಬಂತು ಎಂದು ಎಎಫ್‌ಪಿ ವರದಿ ಮಾಡಿದೆ.

ಇರಾಕ್‌ನಲ್ಲಿರುವ ಅಮೆರಿಕ ಹಾಗೂ ಮಿತ್ರಪಡೆಯ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಆದರೆ ಇರಾನ್ ನಡೆಸಿದ ಮೊದಲ ದಾಳಿಯಿಂದ ಯಾವುದೇ ಜೀವಹಾನಿ ಆಗಿರಲಿಲ್ಲ. ಅಮೆರಿಕದ ಡ್ರೋನ್, ಇರಾನ್‌ನ ಸೇನಾಧಿಕಾರಿ ಕಾಸಿಂ ಸುಲೈಮಾನಿ ಹಾಗೂ ಇರಾಕ್‌ನ ಕಮಾಂಡರ್ ಅಬು ಮಹದಿ ಅಲ್ ಮಹದೀಸ್ ಅವರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮತ್ತು ಸೇನಾ ನೆಲೆಗಳ ಮೇಲೆ ನಡೆದಿರುವ ದಾಳಿಯಲ್ಲಿ ಹಶೇದ್ ಗುಂಪುಗಳ ಕೈವಾಡ ಇದೆ ಎಂದು ಆಪಾದಿಸಿದೆ. ಈ ಮಧ್ಯೆ ಅಮೆರಿಕದ ದಾಳಿಗೆ ಪ್ರತಿದಾಳಿ ನಡೆಸುವುದಾಗಿ ಹಶೇದ್ ಗುಂಪುಗಳು ಎಚ್ಚರಿಕೆ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News