ಆಸ್ಟ್ರೇಲಿಯ: ಬಿಸಿ ವಾತಾವರಣ; ಮತ್ತೆ ವಿಜೃಂಭಿಸಿದ ಕಾಡ್ಗಿಚ್ಚು

Update: 2020-01-09 14:42 GMT

ಮೆಲ್ಬರ್ನ್ (ಆಸ್ಟ್ರೇಲಿಯ), ಜ. 9: ಆಸ್ಟ್ರೇಲಿಯದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡಿವೆ. ಇದರಿಂದಾಗಿ ಹಲವಾರು ಪಟ್ಟಣಗಳು ಮತ್ತು ಗ್ರಾಮಗಳು ಕಾಡ್ಗಿಚ್ಚಿನ ಬೆದರಿಕೆಗೆ ಒಳಗಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಈ ವಲಯದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಮತ್ತು ನೋಟಿಸ್‌ಗಳನ್ನು ನೀಡಿದ್ದಾರೆ.

ವಿಕ್ಟೋರಿಯ ರಾಜ್ಯದಾದ್ಯಂತ ಜನರಿಗೆ ವಿಪತ್ತು ನೋಟಿಸ್‌ಗಳನ್ನು ಕಳೆದ ವಾರ ನೀಡಲಾಗಿದ್ದು, ನೋಟಿಸ್ ಅವಧಿಯನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ. ಅದೇ ವೇಳೆ, ಅಪಾಯ ವಲಯದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ನೆರೆಯ ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ, ಶುಕ್ರವಾರ ಹದಗೆಡಲಿರುವ ಹವಾಮಾನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ನಾಗರಿಕರಿಗೆ ಸಂದೇಶ ರವಾನಿಸಿದ್ದಾರೆ.

 ‘‘ಈ ಬೆಂಕಿಗಳು ಈಗಲೂ ಚಲಿಸುತ್ತಿವೆ ಹಾಗೂ ಈಗಲೂ ವಿಸ್ತಾರಗೊಳ್ಳುತ್ತಿದೆ. ಅವು ಈ ಪರಿಸರದ ನಿವಾಸಿಗಳಿಗೆ ಗಂಭೀರ ಅಪಾಯವನ್ನು ಒಡ್ಡುತ್ತಿದೆ’’ ಎಂದು ವಿಕ್ಟೋರಿಯ ತುರ್ತು ಸೇವೆಗಳ ಸಚಿವೆ ಲೀಸಾ ನೆವಿಲ್ ಟೆಲಿವಿಶನ್‌ನಲ್ಲಿ ಹೇಳಿದ್ದಾರೆ.

ಕಾಡ್ಗಿಚ್ಚು ಈಗಾಗಲೇ ಆಸ್ಟ್ರೇಲಿಯದ 2.55 ಕೋಟಿ ಎಕರೆ ಜಮೀನನ್ನು ಧ್ವಂಸಗೊಳಿಸಿದ್ದು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ ಹಾಗೂ ಸಾವಿರಾರು ಮಂದಿ ಪದೇ ಪದೇ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News