×
Ad

ಸ್ವರಕ್ಷಣೆಗಾಗಿ ಇರಾನ್ ಸೇನಾಧಿಕಾರಿ ಹತ್ಯೆ: ವಿಶ್ವಸಂಸ್ಥೆಗೆ ಅಮೆರಿಕ ವಿವರಣೆ

Update: 2020-01-09 20:29 IST
ಫೈಲ್ ಚಿತ್ರ

ವಿಶ್ವಸಂಸ್ಥೆ, ಜ. 9: ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯನ್ನು ‘ಸ್ವರಕ್ಷಣೆ’ಗಾಗಿ ಹತ್ಯೆ ಮಾಡಲಾಗಿದೆ ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸಿಬ್ಬಂದಿ ಮತ್ತು ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯ ಬಿದ್ದಂತೆ ‘ಹೆಚ್ಚುವರಿ ಕ್ರಮ’ಗಳನ್ನು ಅದು ತೆಗೆದುಕೊಳ್ಳಲಿದೆ ಎಂದು ಅಮೆರಿಕ ಬುಧವಾರ ವಿಶ್ವಸಂಸ್ಥೆಗೆ ಹೇಳಿದೆ.

 ಅದೇ ವೇಳೆ, ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಮತ್ತಷ್ಟು ಅಪಾಯಕ್ಕೆ ಒಡ್ಡುವುದನ್ನು ತಡೆಯುವ ಅಥವಾ ಉದ್ವಿಗ್ನತೆಯನ್ನು ಹೆಚ್ಚಿಸದಂತೆ ಇರಾನ್ ಆಡಳಿತವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಇರಾನ್ ಜೊತೆಗೆ ಗಂಭೀರ ಮಾತುಕತೆಗೂ ಅಮೆರಿಕ ಸಿದ್ಧವಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದ ಪತ್ರದಲ್ಲಿ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಕೆಲಿ ಕ್ರಾಫ್ಟ್ ಹೇಳಿದ್ದಾರೆ.

ವಿಶ್ವಸಂಸ್ಥೆ ಸನ್ನದಿನ 51ನೇ ವಿಧಿಯನ್ವಯ ಇರಾನ್ ಸೇನಾಧಿಕಾರಿ ಸುಲೈಮಾನಿಯ ಹತ್ಯೆ ಸಮರ್ಥನೀಯ ಎಂಬುದಾಗಿಯೂ ಅಮೆರಿಕ ರಾಯಭಾರಿ ತನ್ನ ಪತ್ರದಲ್ಲಿ ಬರೆದಿದ್ದಾರೆ.

ವಿಶ್ವಸಂಸ್ಥೆಯ ಸನ್ನದಿನ 51ನೇ ವಿಧಿಯ ಪ್ರಕಾರ, ಸ್ವ-ರಕ್ಷಣೆಯ ಹಕ್ಕನ್ನು ಚಲಾಯಿಸಿ ತೆಗೆದುಕೊಳ್ಳಲಾದ ಯಾವುದೇ ಕ್ರಮದ ಬಗ್ಗೆ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವರದಿ ನೀಡಬೇಕಾಗುತ್ತದೆ.

ದಾಳಿಗಳನ್ನು ನಡೆಸುವುದರಿಂದ ಅಥವಾ ದಾಳಿಗೆ ಬೆಂಬಲ ನೀಡುವುದರಿಂದ ಇರಾನನ್ನು ತಡೆಯಲು ಹಾಗೂ ದಾಳಿಗಳನ್ನು ನಡೆಸುವ ಅದರ ಸಾಮರ್ಥ್ಯವನ್ನು ಕುಗ್ಗಿಸಲು ಅಮೆರಿಕ ದಾಳಿ ನಡೆಸಿದೆ ಎಂದು ಕೆಲಿ ಹೇಳಿದ್ದಾರೆ.

ಇರಾನ್‌ನಿಂದಲೂ ಸಮರ್ಥನೆ

ಇರಾನ್ ಕೂಡ ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದು, ತಾನು ನಡೆಸಿದ ದಾಳಿಯನ್ನು ವಿಶ್ವಸಂಸ್ಥೆ ಸನ್ನದಿನ 51ನೇ ವಿಧಿಯಡಿ ಸಮರ್ಥಿಸಿದೆ. ಇರಾನ್ ಪತ್ರವು ಭದ್ರತಾ ಮಂಡಳಿಯನ್ನು ತಲುಪಿದ ಬಳಿಕ ಅಮೆರಿಕದ ಪತ್ರ ತಲುಪಿದೆ.

ಇರಾಕ್‌ನಲ್ಲಿರುವ ಅಮೆರಿಕದ ವಾಯು ನೆಲೆಯೊಂದರ ಮೇಲೆ ನಿಯಂತ್ರಿತ ಹಾಗೂ ಪ್ರಮಾಣಬದ್ಧ ಸೇನಾ ದಾಳಿ ನಡೆಸಿದ ಬಳಿಕ, ಉದ್ವಿಗ್ನತೆ ಹೆಚ್ಚುವುದನ್ನು ಅಥವಾ ಯುದ್ಧವನ್ನು ಇರಾನ್ ಬಯಸುವುದಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಇರಾನ್ ರಾಯಭಾರಿ ಮಜೀದ್ ತಖ್ತ್ ರವಂಚಿ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘‘ಆ ಕಾರ್ಯಾಚರಣೆಯು ನಿಖರವಾಗಿತ್ತು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿತ್ತು. ಹಾಗಾಗಿ ಅಲ್ಲಿ ಯಾವುದೇ ನಾಗರಿಕರ ಸಾವು ಸಂಭವಿಸಿಲ್ಲ ಅಥವಾ ಅಲ್ಲಿರುವ ನಾಗರಿಕರ ಸೊತ್ತುಗಳಿಗೆ ಹಾನಿಯಾಗಿಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News