ಸಮಸ್ಯೆ ಬಳಿಕ ಟೆಹರಾನ್ ವಿಮಾನ ನಿಲ್ದಾಣಕ್ಕೆ ಹಿಂದಿರುಗುತ್ತಿದ್ದ ವಿಮಾನ
ಟೆಹರಾನ್, ಜ. 9: ಇರಾನ್ ರಾಜಧಾನಿ ಟೆಹರಾನ್‌ನಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಪತನಗೊಂಡ ಯುಕ್ರೇನಿಯನ್ ವಿಮಾನವು, ಸಮಸ್ಯೆಯೊಂದನ್ನು ಎದುರಿಸಿದ ಬಳಿಕ ವಿಮಾನ ನಿಲ್ದಾಣಕ್ಕೆ ಹಿಂದಿರುಗುತ್ತಿತ್ತು ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದದದ ಎಲ್ಲ 176 ಮಂದಿ ಮೃತಪಟ್ಟಿದ್ದಾರೆ.
‘‘ವಿಮಾನ ನಿಲ್ದಾಣ ವಲಯದಿಂದ ಪಶ್ಚಿಮದತ್ತ ಮುಖ ಮಾಡಿ ಹೊರಟಿದ್ದ ವಿಮಾನವು ಸಮಸ್ಯೆಯೊಂದನ್ನು ಎದುರಿಸಿದ ಬಳಿಕ ಬಲಕ್ಕೆ ತಿರುಗಿತು ಹಾಗೂ ಪತನಗೊಂಡಾಗ ವಿಮಾನ ನಿಲ್ದಾಣಕ್ಕೆ ಹಿಂದಿರುಗುತ್ತಿತ್ತು’’ ಎಂದು ಇರಾನ್ ನಾಗರಿಕ ವಿಮಾನಯಾನ ಸಂಸ್ಥೆ ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
‘‘ವಿಮಾನವು 2,400 ಮೀಟರ್ ಎತ್ತರವನ್ನು ತಲುಪಿದೊಡನೆ ರಾಡಾರ್ ಪರದೆಯಿಂದ ಕಣ್ಮರೆಯಾಯಿತು. ಈ ಅಸಾಧಾರಣ ಪರಿಸ್ಥಿತಿ ಬಗ್ಗೆ ಪೈಲಟ್ ಯಾವುದೇ ರೇಡಿಯೊ ಸಂದೇಶವನ್ನು ಕಳುಹಿಸಲಿಲ್ಲ’’ ಎಂದು ಅದು ತಿಳಿಸಿದೆ.
ಬುಧವಾರ ವಿಮಾನ ನಿಲ್ದಾಣದಿಂದ ಮೇಲೇರಿದ ಸ್ವಲ್ಪವೇ ಹೊತ್ತಿನಲ್ಲಿ ಯುಕ್ರೇನ್ ವಿಮಾನವು ಬೆಂಕಿಯ ಉಂಡೆಯಾಗಿ ಕೆಳಗೆ ಅಪ್ಪಳಿಸಿತು. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಗುಪ್ತಚರ ಮೂಲಗಳು ಹೇಳಿವೆ.