‘ಅಮೆರಿಕನ್ನರ ರಕ್ಷಣೆಗಾಗಿ ಇರಾನ್ ಸೇನಾಧಿಕಾರಿಯ ಹತ್ಯೆ’: ಟ್ರಂಪ್ ಸರಕಾರದ ವಿವರಣೆ ತಿರಸ್ಕರಿಸಿದ ಡೆಮಾಕ್ರಟ್ ಸಂಸದರು

Update: 2020-01-09 16:07 GMT

ವಾಶಿಂಗ್ಟನ್, ಜ. 9: ಅಮೆರಿಕನ್ನರ ರಕ್ಷಣೆಗಾಗಿ ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯನ್ನು ಕೊಲ್ಲಬೇಕಾಯಿತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳ ಸಮಜಾಯಿಷಿಯನ್ನು ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಮತ್ತು ಕೆಲವು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸಂಸದರು ಬುಧವಾರ ತಿರಸ್ಕರಿಸಿದ್ದಾರೆ.

ಅದೇ ವೇಳೆ, ಯುದ್ಧ ಘೋಷಿಸುವ ಅಧ್ಯಕ್ಷರ ಅಧಿಕಾರವನ್ನು ನಿಯಂತ್ರಿಸುವ ಮಸೂದೆಯೊಂದನ್ನೂ ಡೆಮಾಕ್ರಟಿಕ್ ಸಂಸದರು ಮಂಡಿಸಿದ್ದಾರೆ.

ಕಳೆದ ವಾರ ಇರಕ್‌ನಲ್ಲಿ ಕಾಸಿಮ್ ಸುಲೈಮಾನಿಯನ್ನು ಹತ್ಯೆಗೈದ ಡ್ರೋನ್ ದಾಳಿಯನ್ನು ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾಕೆ ಆದೇಶ ನೀಡಬೇಕಾಯಿತು ಎಂಬ ಬಗ್ಗೆ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಜಂಟಿ ಸೇನಾ ಮುಖ್ಯಸ್ಥ ಮಾರ್ಕ್ ಮಿಲಿ ಮತ್ತು ಬೇಹುಗಾರಿಕಾ ಸಂಸ್ಥೆ ಸಿಐಎ ನಿರ್ದೇಶಕಿ ಗಿನಾ ಹ್ಯಾಸ್ಪೆಲ್ ಬುಧವಾರ ಕಾಂಗ್ರೆಸ್‌ನ ಎಲ್ಲ 535 ಸದಸ್ಯರಿಗೆ ವಿವರಣೆ ನೀಡಿದರು.

ಬಳಿಕ, ಟ್ರಂಪ್ ಪಕ್ಷದ ಹೆಚ್ಚಿನ ಸಂಸದರು ದಾಳಿ ನಡೆಸಿರುವುದಕ್ಕಾಗಿ ಹಾಗೂ ವಿವರಣೆ ನೀಡಿರುವುದಕ್ಕಾಗಿ ಅಧಿಕಾರಿಗಳು ಮತ್ತು ಟ್ರಂಪ್‌ರನ್ನು ಶ್ಲಾಘಿಸಿದರು.

ಆದರೆ, ಡೆಮಾಕ್ರಟಿಕ್ ಸಂಸದರು ಮತ್ತು ಕನಿಷ್ಠ ಇಬ್ಬರು ರಿಪಬ್ಲಿಕನ್ನರಿಗೆ ಈ ವಿವರಣೆ ತೃಪ್ತಿ ತರಲಿಲ್ಲ. ಸುಲೈಮಾನಿ ಅಮೆರಿಕಕ್ಕೆ ‘ತಕ್ಷಣದ ಬೆದರಿಕೆ’ಯಾಗಿದ್ದರು ಎಂಬ ಟ್ರಂಪ್ ಮತ್ತು ಸೇನಾಧಿಕಾರಿಗಳ ಹೇಳಿಕೆಗಳಿಗೆ ಅವರು ಪುರಾವೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಮೂರನೇ ದೇಶವೊಂದರಲ್ಲಿ ವಿದೇಶಿ ನಾಯಕನೊಬ್ಬನನ್ನು ಕೊಲ್ಲುವುದು ಕಾನೂನುಬದ್ಧ ಎಂಬ ಟ್ರಂಪ್ ಸರಕಾರದ ವಾದವನ್ನು ಅವರು ಪ್ರಶ್ನಿಸಿದ್ದಾರೆ.

ಗುರುವಾರ ಮಸೂದೆಗೆ ಮತ

ಅಮೆರಿಕ ಅಧ್ಯಕ್ಷರು ಯುದ್ಧ ಘೋಷಿಸುವ ಅಧಿಕಾರವನ್ನು ನಿಯಂತ್ರಿಸುವ ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಗುರುವಾರ ಮತಕ್ಕೆ ಹಾಕಲಾಗುವುದು ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬಳಿಕ ಘೋಷಿಸಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಸದಸ್ಯರು ಸಂಖ್ಯಾಬಲದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

‘‘ಇರಾನ್ ವಿರುದ್ಧ ಯುದ್ಧದಲ್ಲಿ ತೊಡಗುವ ಸರಕಾರದ ನಿರ್ಧಾರದ ಬಗ್ಗೆ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವ ಅದರ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ ಸದಸ್ಯರು ಗಂಭೀರ ಹಾಗೂ ತುರ್ತು ಕಳವಳಗಳನ್ನು ಹೊಂದಿದ್ದಾರೆ’’ ಎಂದು ಪೆಲೋಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News