ಆಂಧ್ರಪ್ರದೇಶದಿಂದ ಥೈಲ್ಯಾಂಡ್‌ಗೆ ಅಕ್ರಮ ಸಾಗಾಟ : ನಾಲ್ಕು ಟನ್ ರಕ್ತಚಂದನ ವಶ
ಮಂಗಳೂರು, ಜ.9: ಆಂಧ್ರಪ್ರದೇಶದಿಂದ ಥೈಲ್ಯಾಂಡ್‌ಗೆ ಅಕ್ರಮವಾಗಿ ರಕ್ತಚಂದನವನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪಣಂಬೂರು ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ನೇತೃತ್ವದ ತಂಡ ಬಂಧಿಸಿದೆ.
ಉಳ್ಳಾಲ ನಿವಾಸಿಗಳಾದ ಲೋಹಿತ್, ತಬ್ರೀಝ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ, ಬೆಂಗಳೂರು ನಿವಾಸಿ ಪ್ರದೀಪ್ ಎಂಬಾತ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ ನಾಲ್ಕು ಟನ್ ರಕ್ತ ಚಂದನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದಿಂದ ರಕ್ತಚಂದನವನ್ನು ಕಂಟೈನರ್‌ನಲ್ಲಿ ತಂದು ಬೈಕಂಪಾಡಿಯ ಗೋಡೌನ್‌ವೊಂದರಲ್ಲಿ ಸಂಗ್ರಹಿಸಿಡಲಾಗಿತ್ತು. ಈ ರಕ್ತಚಂದನವು ಬೆಂಗಳೂರಿನ ಪ್ರದೀಪ್ ಎಂಬಾತನಿಗೆ ಸೇರಿದ್ದು, ಆತನಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಬಂಧಿತರು ರಕ್ತಚಂದನ ಸಾಗಾಟಕ್ಕೆ ಸಹಕರಿಸಿದ್ದರು ಎಂಬ ಆರೋಪವಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವ ದಲ್ಲಿ ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.