ಆಝಾದ್‌ಗೆ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ

Update: 2020-01-09 16:50 GMT

ಬ್ರಹ್ಮಾವರ, ಜ.9: ಬಂಧಿತ ಯುವ ಹೋರಾಟಗಾರ ಚಂದ್ರಶೇಖರ್ ಆಝಾದ್‌ ರಾವಣ್ ರನ್ನು ಕೂಡಲೇ ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸ ಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಮೊಂಬತ್ತಿ ಪ್ರತಿಭಟನೆಯನ್ನು ಇಂದು ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಸುಂದರ್ ಮಾಸ್ಟರ್, ಈ ದೇಶದಲ್ಲಿ ಜನವಿರೋಧಿ, ಕೋಮು ವಾದಿ, ಪ್ರಜಾಪ್ರಭುತ್ವ ವಿರೋಧಿ ಸರಕಾರ ಆಡಳಿತ ನಡೆಸುತ್ತಿದೆ. ಉತ್ತರ ಪ್ರದೇಶ ರಾಜ್ಯದ ಯೋಗಿ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದೆಲ್ಲದರ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ ಸಂಗ್ರಾಮ ಆರಂಭವಾಗಿದೆ ಎಂದರು.

ನಮಗೆ ಬದುಕುವ ಹಕ್ಕು ಬೇಕಾಗಿದೆ ಮತ್ತು ಪೌರತ್ವ ಕಾಯಿದೆಯನ್ನು ನಿಷೇಧ ಮಾಡಬೇಕು. ಈ ವಿಚಾರದಲ್ಲಿ ಜನತೆ ಬಿಜೆಪಿ ಯವರಿಗೆ ಸರಿಯಾದ ಪಾಠ ಕಲಿಸಬೇಕು. ಇದರ ವಿರುದ್ಧ ಹೋರಾಟ ನಡೆಸಿದ ಆಜಾದ್‌ರನ್ನು ಬಂಧಿಸಿ ಬಿಜೆಪಿ ಸರಕಾರ ಕ್ರೌರ್ಯ ಮೆರೆಯುತ್ತಿದೆ. ಅನಾರೋಗ್ಯ ಪೀಡಿತರಾದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸದೆ ಅಮಾನವೀಯವಾಗಿ ವರ್ತಿಸು ತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಆಝಾದ್‌ ಸತ್ಯ ಮತ್ತು ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡಿ ಪಾಗಿಟ್ಟ ಯುವ ನಾಯಕ. ಅನ್ಯಾಯಕ್ಕೆ ಒಳಗಾದವರ ಮತ್ತು ಶೋಷಿತರ ಹಕ್ಕುಗಳಿಗಾಗಿ ಪ್ರಾಣದ ಹಂಗು ತೊರೆದ ನಿರಂತರ ಹೋರಾಟ ಮಾಡಿರುವ ಆಜಾದ್, ಎಲ್ಲರಿಗೂ ಮಾದರಿಯಾಗಿರುವ ಯುವಕ ಎಂದರು.

ಸರಕಾರ ನೀತಿಯ ವಿರುದ್ಧ ಹೋರಾಟ ಮಾಡುವವರನ್ನು ಕೇಂದ್ರ ಸರಕಾರ ಬೇರೆ ಬೇರೆ ರೀತಿಯಲ್ಲಿ ಹತ್ತಿಕ್ಕಲು ಮತ್ತು ಅವರ ಧ್ವನಿಯನ್ನು ಧಮನಿಸುವ ಪ್ರಯತ್ನ ಮಾಡುತ್ತಿದೆ. ಅದರ ಒಂದು ಭಾಗವಾಗಿ ಇಂದು ಆಝಾದ್‌ ಅವರನ್ನು ಬಂಧಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರೂ ಚಿಕಿತ್ಸೆ ನೀಡದೆ ಅಮಾನವೀಯವಾಗಿ ವರ್ತಿಸುತ್ತಿದೆ. ಇದು ಕೇವಲ ದಲಿತರ ಹೋರಾಟ ಅಲ್ಲ, ನಮ್ಮೆಲ್ಲರ ಈ ಹೋರಾಟವನ್ನು ಒಗ್ಗಟ್ಟಿನಿಂದ ಮುಂದುವರಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಹಿರಿಯ ಚಿಂತಕ ಪ್ರೊ.ಫಣಿರಾಜ್, ಬಹುಜನ ಕ್ರಾಂತಿ ಮೋರ್ಚಾದ ನಾಯಕ ಅನಿಲ್ ಕಾಮ್ಟೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಪತ್ರಕರ್ತ ಶಶಿಧರ ಹೆಮ್ಮಾಡಿ, ಹೋರಾಟಗಾರ ಹರ್ಷ ಕುಮಾರ್ ಕುಗ್ವೆ, ದಸಂಸ ಮುಖಂಡ ಶಾಮರಾಜ್ ಬಿತಿರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News