ವಿತ್ತ ಸಚಿವೆ ಇಲ್ಲದೆ ಪ್ರಧಾನಿಯ ಬಜೆಟ್‌ಪೂರ್ವ ಚರ್ಚೆ !

Update: 2020-01-30 08:01 GMT

ಹೊಸದಿಲ್ಲಿ, ಜ.9: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಕಚೇರಿಯಲ್ಲಿ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರೊಂದಿಗೆ ಸರಕಾರ ಆಯೋಜಿಸಿದ್ದ ಬಜೆಟ್ ಪೂರ್ವ ಚರ್ಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೈರುಹಾಜರಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ವ್ಯಂಗ್ಯವಾಡಿದೆ.

ಇಲ್ಲೊಂದು ಸಲಹೆಯಿದೆ. ಮುಂದಿನ ಬಜೆಟ್ ಚರ್ಚೆಗೆ ವಿತ್ತ ಸಚಿವೆಯನ್ನು ಆಹ್ವಾನಿಸುವ ಸಲಹೆಯನ್ನು ಪರಿಗಣಿಸಿ ಎಂದು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ನಲ್ಲಿ ‘ಫೈಂಡಿಂಗ್ ನಿರ್ಮಲಾ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ. ಓರ್ವ ಮಹಿಳೆ ಮಾಡುವ ಕೆಲಸ ಮಾಡಲು ಎಷ್ಟು ಮಂದಿ ಪುರುಷರ ಅಗತ್ಯವಿದೆ ಎಂದು ಮತ್ತೊಂದು ಹ್ಯಾಶ್‌ಟ್ಯಾಗ್ ಬಳಸಿ ಟೀಕೆ ಮಾಡಲಾಗಿದೆ. ಆರ್ಥಿಕ ತಜ್ಞರು, ಉದ್ಯಮಿಗಳು, ಕೃಷಿ ತಜ್ಞರು ಹಾಗೂ ಇತರರನ್ನು ಆಹ್ವಾನಿಸಿದ ಸರಕಾರಕ್ಕೆ ವಿತ್ತ ಸಚಿವೆಯನ್ನು ಆಹ್ವಾನಿಸಲು ಮರೆತು ಹೋಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಧಾನಿ ಉಪಸ್ಥಿತಿಯಲ್ಲಿ ನಡೆದ ಬಜೆಟ್ ಪೂರ್ವ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭ ಸಚಿವೆ ನಿರ್ಮಲಾ ಸೀತಾರಾಮನ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬಜೆಟ್ ಪೂರ್ವ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News