×
Ad

ಶ್ರೀಕೃಷ್ಣ ಮಠದಲ್ಲಿ ಶ್ರೀವಿಶ್ವೇಶತೀರ್ಥರ ಆರಾಧನೆ

Update: 2020-01-09 22:31 IST

ಉಡುಪಿ, ಜ.9: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀವಿಶ್ವೇಶತೀರ್ಥರ ಆರಾಧನೆ ಪರ್ಯಾಯ ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.

ಶ್ರೀವಿಶ್ವೇಶತೀರ್ಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಹಾಗೂ ಈ ಪ್ರಯುಕ್ತ ರಾಜಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆಗೆ ಅವರು ಚಾಲನೆ ನೀಡಿದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಶ್ರೀವಿಶ್ವೇಶತೀರ್ಥರು ವಿದ್ಯಾಭ್ಯಾಸ, ಧಾರ್ಮಿಕ, ದೀನದಲಿತರಿಗೆ ಸೌಲಭ್ಯ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಛಾಪನ್ನು ಮೂಡಿಸಿದವರು. ತುರ್ತುಪರಿಸ್ಥಿತಿಯ ಕಾಲದಲ್ಲಿ ಬಡವರ ಪರಿಸ್ಥಿತಿಯ ಕುರಿತು ಇಂದಿರಾಗಾಂಧಿಗೆ ಪತ್ರ ಬರೆದವರು ಶ್ರೀ. ಪೂಜೆ, ಪಾಠ, ಪ್ರವಚನದ ಜೊತೆಗೆ ತನ್ನಲ್ಲಿಗೆ ಬಂದ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರ ಮಾತನ್ನು ಆಲಿಸಿ ಸಾಂತ್ವನವನ್ನು ನೀಡಿದವರು. ಇಂದು ಅವರ ಆರಾಧನೆಯ ಪ್ರಯುಕ್ತ ಎಲ್ಲ ಕಡೆಗಳಲ್ಲೂ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ರಘುಪತಿ ಭಟ್ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಪಲಿಮಾರು ಮಠದ ಪಿಆರ್‌ಓ ಶ್ರೀಶ ಭಟ್ ಕಡೆಕಾರ್ ಹಾಗೂ ಉದ್ಯಮಿ ಭುವನೇಂದ್ರ ಕಿದಿಯೂರು ಸಹ ಉಪಸ್ಥಿತರಿದ್ದರು.

ಸುಮಾರು 2000ಕ್ಕೂ ಅಧಿಕ ಭಕ್ತರು ರಾಜಾಂಗಣದಲ್ಲಿ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News