×
Ad

ಎಲ್ಲಾ ಬೀದಿಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಣೆ: ಶಾನಾಡಿ

Update: 2020-01-09 22:35 IST

ಮಂಗಳೂರು, ಜ.9: ನಗರದಲ್ಲಿ ಸದ್ಯ 308 ಮಂದಿ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಲಾಗಿದೆ. ಮುಂದಿನ 2-3 ವಾರಗಳಲ್ಲಿ ಇನ್ನುಳಿದ ಎಲ್ಲಾ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಅವರೆಲ್ಲರಿಗೆ ವ್ಯಾಪಾರ ಮಾಡಲು ಗುರುತಿನ ಚೀಟಿ ಮತ್ತು ಸ್ಥಳಾವಕಾಶದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಂಗಳೂರು ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ತಿಳಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ದ.ಕ.ಜಿಲ್ಲಾಡಳಿತ, ಮಂಗಳೂರು ಮನಪಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಾಲಯ ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ ಮಂಗಳೂರು ಮತ್ತು ಮಹಿಳಾ ತರಕಾರಿ ಬೆಳೆಗಾರರ ತಲೆಹೊರೆ ಮಾರಾಟಗಾರರ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ಪುರಭವನದಲ್ಲಿ ಗುರುವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಸ್ಥರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸರಕಾರಿ ಸವಲತ್ತುಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಧರಿಗೆ ವ್ಯಾಪಾರ ಮಾಡಲು ಈಗಾಗಲೇ ಪುರಭವನದ ಹಿಂಬದಿ ಟೆಂಪೊ ನಿಲ್ದಾಣದ ಪಕ್ಕದಲ್ಲಿ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಕಾದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಇತರ ಭಾಗಗಳಲ್ಲಿ ಎಲ್ಲಾದರೂ ಜಾಗ ಇದೆಯೇ ಎಂದು ಸಮೀಕ್ಷೆ ನಡೆಸಲಾಗುವುದು. ಈಗಾಗಲೇ ಗುರುತಿಸಲಾಗಿರುವ 308 ಜನ ಬೀದಿ ಬದಿ ವ್ಯಾಪಾರಸ್ಧರ ಪೈಕಿ 215 ಮಂದಿಗೆ ಗುರುತು ಕಾರ್ಡ್ ಮತ್ತು ಮಾರಾಟ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ ಎಂದರು.

ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಗುರುತು ಕಾರ್ಡ್ ಮತ್ತು ಮಾರಾಟ ಪ್ರಮಾಣ ಪತ್ರ ನೀಡುತ್ತಿರುವುದು ರಾಜ್ಯದಲ್ಲಿಯೇ ಇದು ಪ್ರಥಮ ಪ್ರಯೋಗ. ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಚುನಾವಣೆ ನಡೆಸಿದ್ದು, ಪದಾಧಿಕಾರಿ ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕ್ಷೇಮಾಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು. ಸಮವಸ್ತ್ರ ವಿತರಿಸುವ ಕುರಿತಂತೆ ಚಿಂತನೆ ನಡೆದಿದೆ ಎಂದು ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಹೇಳಿದರು.

ಬೀದಿ ಬಿದಿ ವ್ಯಾಪಾರಿಗಳು ವಾಹನ ಸಂಚಾರಕ್ಕೆ ಅಡ್ಡಿ, ಅಲ್ಲಲ್ಲಿ ಕಸ ಹಾಕಿ ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದಾರೆ ಇತ್ಯಾದಿ ದೂರುಗಳಿವೆ. ಮುಂದಿನ ದಿನಗಳಲ್ಲಿ ಇಂತಹ ಆರೋಪಗಳಿಗೆ ಅವಕಾಶ ನೀಡದಂತೆ ವರ್ತಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಅಯುಕ್ತ ಸಂತೋಷ್ ಕುಮಾರ್, ಕಾರ್ಮಿಕ ಇಲಾಖೆಯ ಅಧಿಕಾರಿ ವಿಲ್ಮಾ, ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ಕಾರ್ಮಿಕ ಇಲಾಖೆಯ ಇಎಸ್‌ಐ ಅಧಿಕಾರಿ ಡಾ.ಭಾಗ್ಯಲಕ್ಷ್ಮಿ, ಡಾ. ರತ್ನಾಕರ್, ಡಾ. ಬದ್ರುದ್ದೀನ್, ಡಾ. ನವೀನ್ ಕುಲಾಲ್, ಡಾ. ದೀಪಕ್ ಮಡಿ, ಡಾ. ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಮಾಲಿನಿ ರೊಡ್ರಿಗಸ್ ಸ್ವಾಗತಿಸಿದರು. ಚಿತ್ತರಂಜನ್ ದಾಸ್ ವಂದಿಸಿದರು. ಅಚ್ಚುತ ಕಾರ್ಯಕ್ರಮ ನಿರೂಪಿಸಿದರು.

ಕ್ಯೂ ಆರ್ ಕೋಡ್ ಇರುವ ಗುರುತು ಕಾರ್ಡ್

ಈ ಸಂದರ್ಭ ಸಾಂಕೇತಿಕವಾಗಿ ಕೆಲವು ಬೀದಿ ಬದಿ ವ್ಯಾಪಾರಿಗಳಿಗೆ ಗುರುತು ಕಾರ್ಡ್ ಮತ್ತು ಮಾರಾಟ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಧಿಕೃತ ಎಂದು ಗುರುತಿಸಲಾಗುವ ಬೀದಿ ಬದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್ ಇರುವ ಗುರುತು ಕಾರ್ಡ್ ಮತ್ತು ಮಾರಾಟ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಎರಡೂ ದಾಖಲೆ ಪತ್ರಗಳಲ್ಲಿ ಇರುವ ಕ್ಯೂ ಆರ್ ಕೋಡ್‌ನ್ನು ಮೊಬೈಲ್ ಫೋನ್‌ನಲ್ಲಿ ಕ್ಲಿಕ್ ಮಾಡಿ ಸ್ಕ್ಯಾನ್ ಮಾಡಿದಾಗ ಅವರ ಹೆಸರು, ವಿಳಾಸ ಮತ್ತಿತರ ವಿವರ ಕಾಣಿಸುತ್ತದೆ. ಅವರು ಅಧಿಕೃತ ಬೀದಿ ಬದಿ ವ್ಯಾಪಾರಿಯೇ ಎನ್ನುವುದನ್ನು ಪೊಲೀಸರು ಮತ್ತು ಇತರ ಅಧಿಕಾರಿಗಳಿಗೆ ಗುರುತಿಸಲು ಇದು ಸಹಾಯಕವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News