×
Ad

ಪ್ರಕಾಶಾಭಿನಂದನೆಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ: ಪ್ರಕಾಶ್ ಶೆಟ್ಟಿ

Update: 2020-01-09 22:39 IST

ಮಂಗಳೂರು, ಜ. 9: ಎಂಆರ್‌ಜಿ ಗ್ರೂಫ್‌ನ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ಜರುಗಿದ ಪ್ರಕಾಶಾಭಿನಂದ 60ರ ಸಂಭ್ರಮದ ಯಶಸ್ಸಿಗೆ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವು ಮರವೂರಿನ ಗ್ರಾಂಡ್ ಬೇ ಗಾರ್ಡ್‌ನಲ್ಲಿ ಇತ್ತೀಚೆಗೆ ನಡೆಯಿತು.

ಧನ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಪ್ರಕಾಶ್ ಶೆಟ್ಟಿ ‘ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಅಭಿನಂದನೆ ನಾನು ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಸಾರ್ವಜನಿಕರ ಪ್ರೀತಿ-ಅಭಿಮಾನದ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಕಾರ್ಯಕ್ರಮದ ಯಶಸ್ಸಿಗೆ ರಚನೆಗೊಂಡ ಸಮಿತಿ ಸದಸ್ಯರು ಸ್ವಯಂ ಸೇವಕರಾಗಿ ದುಡಿದಿದ್ದಾರೆ. ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಹೊರಟಾಗ ಮನಸ್ಸಿನಲ್ಲಿ ಒಂದು ಧೃಢ ನಿರ್ಧಾರಕ್ಕೆ ಬಂದಿದ್ದೆ. ಜೀವನದಲ್ಲಿ ಒಂದು ಮಟ್ಟ ತಲುಪಿದರೆ ನನ್ನ ತುಳುನಾಡ ಮತ್ತು ಇಲ್ಲಿಯ ತುಳುವರಿಗೆ ಮತ್ತು ಬಂಟ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಭಾವಿಸಿದ್ದೆ. ಸಮಾಜದಲ್ಲಿ ಇನ್ನೂ ಸಂಕಷ್ಟದಲ್ಲಿ ಇರುವವರು ಇದ್ದಾರೆ. ಪ್ರತೀ ವರ್ಷ ಸಮಾಜದಲ್ಲಿರುವ ಕಡು ಬಡತನದಲ್ಲಿರುವ ಜನರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿಯ ಪ್ರಧಾನ ಸಂಚಾಲಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿದರು. ಪ್ರಕಾಶಾಭಿನಂದನೆ ಕಾರ್ಯ ಕ್ರಮದ ಮಾರ್ಗದರ್ಶಕ ಡಾ.ಎಂ. ಮೋಹನ್ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರಿದೇವಿ ಎಜುಕೇಶನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ಎಂ. ಸುರೇಶ್ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಸಂಚಾಲಕ ಮನೋಹರ ಎಸ್. ಶೆಟ್ಟಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರೆ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News