ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ : ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ
ಮಂಗಳೂರು, ಜ.9: ಸರಕಾರದಿಂದ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಪ್ಲೇ ಸ್ಕೂಲ್‌ಗಳಿಗೆ ಕಡಿವಾಣ ಹಾಕಲು ಬರುವುದಿಲ್ಲ. ಸದ್ಯ ಅಂಗನವಾಡಿಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಜತೆಗೆ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು, ಹಿರಿಯ ನಾಗರಿಕ ಸಬಲೀಕರಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿನ ಅಂಗನವಾಡಿ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇವೆ. ಹಾಗಾಗಿಯೇ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿಲ್ಲ. ಅಗತ್ಯ ಸೌಲಭ್ಯ ಒದಗಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಕ್ಕಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.
ಕಾರವಾರದ ಅಂಗನವಾಡಿಯೊಂದರಲ್ಲಿ ಆಧುನಿಕ ಸ್ಪರ್ಶ ನೀಡಲಾಗಿದೆ. ಆಟಿಕೆಯೊಂದರ ಮೇಲಿನ ಅಕ್ಷರಗಳನ್ನು ಒತ್ತಿದರೆ ನಿರ್ದಿಷ್ಟ ಅಕ್ಷರದ ಶಬ್ದವನ್ನು ಸ್ಪಷ್ಟವಾಗಿ ಕೇಳುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ಇದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಜತೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅಂಗನವಾಡಿಗಳಿಗೆ ನಿವೇಶನ ನೀಡಲಾಗುವುದು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಂಗನವಾಡಿ ಪುನಶ್ವೇತನದಿಂದ ಅಂಗನವಾಡಿ ಕಾರ್ಯಕರ್ತೆರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ದೂರಾಗಲಿದೆ ಎಂದರು.
ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಗೆ ಸಂಬಂಧಿಸಿದಂತೆ 2014-18ರವರೆ ಹುಟ್ಟಿದ ಹೆಣ್ಣುಮಕ್ಕಳು ಯೋಜನೆಯಿಂದ ವಂಚಿತರಾಗುತ್ತಿರುವ ದೂರುಗಳು ಕೇಳಿಬಂದಿವೆ. ಜಿಲ್ಲೆಯಲ್ಲೂ ಅಂತಹ ಪ್ರಕರಣಗಳಿದ್ದಲ್ಲಿ ಇಂದಿನಿಂದಲೇ ವಂಚಿತರ ಹೆಸರುಗಳ ಪಟ್ಟಿ ಮಾಡಿಕೊಂಡು ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ-ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಆಹಾರ ಸೇವಿಸಲು ಹಿಂಜರಿಯುತ್ತಿರುವುದು, ಅಂಗನವಾಡಿ ಕೇಂದ್ರಗಳು ಹಾಗೂ ಮನೆಗಳಿಗೆ ದೂರ ಇರುವುದರಿಂದ ಹಲವು ಸಮಸ್ಯೆಗಳು ಉದ್ಭವಿಸಿ ಫಲಾನುಭವಿಗಳು ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳು ಸಚಿವೆಯ ಗಮನಕ್ಕೆ ತಂದರು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವೆ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎ. ಉಸ್ಮಾನ್ ಮಾತನಾಡಿ, ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರವೊಂದನ್ನು ತೆರೆಯುವ ಅಗತ್ಯವಿದೆ. ಈ ಬಗ್ಗೆ ಹಿಂದೆ ಮನವಿ ಸಲ್ಲಿಸಲಾದರೂ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ, ಬಾಲಕಿಯರ ಬಾಲಮಂದಿರ ತೆರೆಯಲು ಸರಕಾರ ಅನುಮತಿ ನೀಡಿದಲ್ಲಿ ತುಂಬ ಪ್ರಯೋಜನಕಾರಿಯಾಗಲಿದ್ದು, ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥನ್ ಮಾತನಾಡಿ, ಜಿಲ್ಲೆಯಲ್ಲಿ ವಿತರಿಸುತ್ತಿರುವ ಪಡಿತರದಲ್ಲಿ ಅಕ್ಕಿಯ ಪ್ರಮಾಣ ತಗ್ಗಸಿ ಗೋಧಿ ನೀಡಲು ಹಲವು ಮನವಿಗಳು ಬರುತ್ತಿವೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಸಂದರ್ಭ ಅಕ್ಕಿಯ ಪ್ರಮಾಣ ಕಡಿಮೆ ಮಾಡಿ ಗೋಧಿ ಸೇರಿದಂತೆ ವಿವಿಧ ಪೌಷ್ಟಿಕಾಂಶ ಧಾನ್ಯ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಸೆಲ್ವಮಣಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸಾಮಾಜಿಕ ನ್ಯಾಯಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
‘ನೈಜ ಪರಿಸ್ಥಿತಿ ಅರಿಯಲು ಸ್ಥಳಕ್ಕೆ ಭೇಟಿ’
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು, ಹಿರಿಯ ನಾಗರಿಕ ಸಬಲೀಕರಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಪ್ರಗತಿಯ ಬಗ್ಗೆ ಲೆಕ್ಕದಲ್ಲಿ ಅಂಕಿ-ಅಂಶಗಳು ಸರಿಯಾಗಿವೆ. ಆದರೆ ನೈಜ ಪರಿಸ್ಥಿತಿ ಹೇಗಿದೆಯೋ ತಿಳಿದಿಲ್ಲ. ಈ ಬಗ್ಗೆ ಜಿಲ್ಲೆಯ ವಿವಿಧೆಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ದಾಖಲೆಯಲ್ಲಿ ಉಲ್ಲೇಖಿಸಿದ ಮಾಹಿತಿ ಸ್ಥಳಕ್ಕೆ ಭೇಟಿ ಯಾದಾಗ ವ್ಯತ್ಯಾಸ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ರವಾನಿಸಿದ್ದಾರೆ.