×
Ad

ಜ.10ರಿಂದ ಕರಾವಳಿ ಉತ್ಸವ : ವೈಭವಯುತ ಸಾಂಸ್ಕೃತಿಕ ಮೆರವಣಿಗೆ

Update: 2020-01-09 22:54 IST

ಮಂಗಳೂರು, ಜ.9: ದ.ಕ. ಜಿಲ್ಲೆಯ ಉತ್ಸವಗಳಲ್ಲಿ ಒಂದಾದ ‘ಕರಾವಳಿ ಉತ್ಸವ’ಕ್ಕೆ ಜ.10ರಂದು ಚಾಲನೆ ದೊರಕಲಿದೆ. ಉತ್ಸವದ ಪ್ರಯುಕ್ತ ವೈಭವಯುತ ಸಾಂಸ್ಕೃತಿಕ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಅಪರಾಹ್ನ 3:30ಕ್ಕೆ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ವೈವಿಧ್ಯಮಯ ಕಲಾ ಪ್ರದರ್ಶನದೊಂದಿಗೆ ಭಾಗವಹಿಸಲಿದ್ದು, ನಗರದ ಜನತೆಗೆ ವಿವಿಧ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ದೊರಕಲಿದೆ. ಮೆರವಣಿಗೆಯ ಯಶಸ್ಸಿಗೆ ಎಲ್ಲಾ ಸಿದ್ಧತೆಗಳು ಅಂತಿಮಗೊಂಡಿದ್ದು, ಈಗಾಗಲೇ ರಾಜ್ಯದ ಕಲಾ ತಂಡಗಳು ಮಂಗಳೂರು ತಲುಪಿವೆ. ಸುಮಾರು 28 ಕಲಾತಂಡಗಳು ಹಾಗೂ ಯುವಜನ ಸಂಘಟನೆಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ನಗರದ ನೆಹರೂ ಮೈದಾನದಿಂದ ಹೊರಡುವ ಜನಪದ ಸಾಂಸ್ಕೃತಿಕ ಮೆರವಣಿಗೆ ಕೆ.ಎಸ್. ರಾವ್ ರಸ್ತೆ, ನವಭಾರತ್ ವೃತ್ತ, ಪಿಎಸ್, ಲಾಲ್‌ಭಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಲಿದೆ. ಸಂಜೆ 5:30ಕ್ಕೆ ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಸಂಜೆ 6 ಗಂಟೆಗೆ ಚಿತ್ರನಟ ರಿಷಬ್ ಶೆಟ್ಟಿ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕರಾವಳಿ ಉತ್ಸವದ ಅಂಗವಾಗಿ ಜ.11 ರಿಂದ 19ರವರೆಗೆ ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್‌ನಲ್ಲಿ ನಾಡಿನ ಖ್ಯಾತ ಕಲಾವಿದರು ಹಾಗೂ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.11ರಂದು ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಕರಾವಳಿ ಉತ್ಸವ ಕ್ರೀಡೋತ್ಸವ, ಜ.16 ಮತ್ತು 17ರಂದು ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಯುವ ಉತ್ಸವ’ ಕದ್ರಿ ಪಾರ್ಕ್‌ನಲ್ಲಿ ನಡೆಯಲಿವೆ.

ಜ.17ರಿಂದ ಪಣಂಬೂರು ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಲಿದೆ. ಇದರಲ್ಲಿ ದೇಶ ವಿದೇಶಗಳ ಗಾಳಿಪಟ ಪಟುಗಳಲ್ಲದೆ, ಬೀಚ್ ಕ್ರೀಡಾಕೂಟಗಳು, ಸಂಗೀತ ಕಾರ್ಯಕ್ರಮಗಳೂ ನಡೆಯಲಿದೆ. ಜ.19ರಂದು ಸಮಾರೋಪ ನಡೆಯಲಿದೆ.

ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನವು ಜ.10ರಿಂದ ಫೆಬ್ರವರಿ 10ರರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಅಂಗಡಿ/ಸ್ಟಾಲ್‌ಗಳು ಲಭ್ಯ

ಕರಾವಳಿ ಉತ್ಸವ 2019ರ ವಸ್ತು ಪ್ರದರ್ಶನ ಸಮಿತಿ ವತಿಯಿಂದ ನಗರದ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ಜ.10ರಿಂದ ನಡೆಯಲಿರುವ ವಸ್ತು ಪ್ರದರ್ಶನದ ಒಳಾಂಗಣದಲ್ಲಿ 20/20 ಹಾಗೂ 10/10 ಅಳತೆಯ ವಾಣಿಜ್ಯ ಉದ್ದೇಶದ ಅಂಗಡಿ/ಸ್ಟಾಲ್‌ಗಳು ಲಭ್ಯವಿದೆ. ಮಾಹಿತಿಗೆ ಮಂಗಳೂರು ಮನಪಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News