×
Ad

ಶೃಂಗೇರಿ ಸಾಹಿತ್ಯ ಸಮ್ಮೇಳನ ವಿಚಾರದಲ್ಲಿ ಸಿಟಿ ರವಿ ನಡವಳಿಕೆ ಅಕ್ಷಮ್ಯ : ಡಿವೈಎಫ್‌ಐ

Update: 2020-01-09 23:03 IST

ಮಂಗಳೂರು, ಜ.9: ಶೃಂಗೇರಿಯಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈದ್ಧಾಂತಿಕ ದ್ವೇಷದಿಂದ ಅಧಿಕಾರದ ಬಲದ ಮೂಲಕ ತಡೆಯೊಡ್ಡುತ್ತಿರುವ ಸಚಿವ ಸಿಟಿ ರವಿಯ ನಡೆ ಅಕ್ಷಮ್ಯವಾಗಿದೆ. ಸಾಹಿತ್ಯ, ಸಂಸ್ಕೃತಿಯ ಅರಿವಿಲ್ಲದ, ಗೂಂಡಾ ನಡವಳಿಕೆಯ ಸಿಟಿ ರವಿಯಂತಹವರು ಸಚಿವ ಸಂಪುಟದಲ್ಲಿರುವುದು ಕನ್ನಡದ ಶ್ರೀಮಂತ ಪರಂಪರೆಗೆ ಅಪಮಾನ ಕಾರಿಯಾಗಿದ್ದು ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

 ಮಲೆನಾಡಿನ ಜನಪರ ಹೋರಾಟಗಾರರೂ, ಮಹತ್ವದ ಬರಹಗಾರರೂ ಆಗಿರುವ ಕಲ್ಕುಳಿ ವಿಠಲ ಹೆಗ್ಗಡೆಯವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದಾರೆ. ಅವರ ಎಡಪಂಥೀಯ ಒಲವನ್ನೇ ಮುಂದಿಟ್ಟು ಅಧ್ಯಕ್ಷತೆಯಿಂದ ಕೈಬಿಡಲು ಜಿಲ್ಲಾ ಸಾಹಿತ್ಯ ಪರಿಷತ್ ಮೇಲೆ ಅನೈತಿಕ ಒತ್ತಡ ಹೇರಿದ್ದ ಸಿಟಿ ರವಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಘನತೆಯ ನಡವಳಿಕೆಯಿಂದ ಅವಮಾನಿತರಾಗಿದ್ದಾರೆ. ಜಿದ್ದಿಗೆ ಬಿದ್ದಿರುವ ಸಿಟಿ ರವಿ ಸಮ್ಮೇಳನಕ್ಕೆ ಅನುದಾನದ ತಡೆ ಹಿಡಿಯುವಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶೃಂಗೇರಿ ಪುರಸಭೆಯನ್ನು ದುರ್ಬಳಕೆ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನವನ್ನೇ ರದ್ದುಗೊಳಿಸಲು ಯತ್ನಿಸುತ್ತಿದ್ದಾರೆ. ಸಂಘಟಕರು, ಸಾಹಿತ್ಯ ಪ್ರೇಮಿಗಳು ಈ ಬೆದರಿಕೆಗಳಿಗೆ ಜಗ್ಗದೆ ಕಲ್ಕುಳಿಯ ಅಧ್ಯಕ್ಷತೆಯಲ್ಲೇ ಸಮ್ಮೇಳನ ನಡೆಸಲು ದೃಢ ನಿರ್ಧಾರ ಮಾಡಿರುವುದರಿಂದ ಹತಾಷರಾಗಿರುವ ಸಿಟಿ ರವಿ ಇದೀಗ ಪುರಸಭೆಯ ಮೂಲಕ ಸಮ್ಮೇಳನದ ಅಲಂಕಾರಗಳನ್ನು ತೆಗೆಸುವ, ತನ್ನ ಕ್ರಿಮಿನಲ್ ಹಿಂಬಾಲಕರ ಮೂಲಕ ಸಮ್ಮೇಳನವನ್ನು ತಡೆಯುವ ಬೆದರಿಕೆ ಒಡ್ಡುತ್ತಿದ್ದಾರೆ. ಇದು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ರಂಗದ ಚರಿತ್ರೆಯಲ್ಲಿ ಕಂಡರಿಯದ ಅಸಹ್ಯದ ನಡೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಲ್ಕುಳಿಯವರು ಮಲೆನಾಡಿನ ಎಲ್ಲಾ ಸಂಕಟಗಳ ಸಂದರ್ಭ ಜನಪರ ಹೋರಾಟಗಳ ಮುಂಚೂಣಿಯಲ್ಲಿ ನಿಂತು ವೈಯುಕ್ತಿಕ ಬದುಕಿನಲ್ಲಿ ಹಲವು ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ. ಸಿಟಿ ರವಿ ನೇತೃತ್ವದಲ್ಲಿ ಮಲೆನಾಡಿನ ನೆಮ್ಮದಿಗೆ ಬೆಂಕಿ ಹಚ್ವುವ ಕೋಮುವಾದಿ ಕಾರ್ಯಾಚರಣೆಗೆ ಮುಖಾಮುಖಿಯಾಗಿದ್ದಾರೆ. ಕೋಮುವಾದದ ಜೊತೆಗೆ ಮಲೆನಾಡಿನ ಟಿಂಬರ್, ಗ್ಯಾಂಬ್ಲಿಂಗ್ ದಂಧೆಗಳಲ್ಲಿ ತೊಡಗಿದ ಶಕ್ತಿಗಳನ್ನು ಬೆಂಬಲಿಸುತ್ತಾ ರಾಜಕೀಯವಾಗಿ ಬೆಳೆದ ರವಿಗೆ ಸಹಜವಾಗಿ ಕಲ್ಕುಳಿ ವಿಠಲ ಹೆಗ್ಗಡೆ ಹಾಗೂ ಅವರು ಪ್ರತಿಪಾದಿಸುವ ಜೀವಪರ ಸಿದ್ದಾಂತಗಳ ಕುರಿತು ಅಸಹನೆ ಇದೆ. ಈ ಹಿನ್ನಲೆಯಲ್ಲಿ ಈಗ ಸಾಹಿತ್ಯ ಸಮ್ಮೇಳನಕ್ಕೂ ಅಧಿಕಾರದ ಮದದಿಂದ ತಡೆಯೊಡ್ಡಲು ಅನೈತಿಕ ಮಾರ್ಗ ತುಳಿದಿದ್ದಾರೆ. ಸಚಿವ ರವಿಯ ಈ ನಡವಳಿಕೆ ಮುಂದಿನ ದಿನಗಳ ಅಪಾಯದ ಮುನ್ಸೂಚನೆಯಂತಿದ್ದು ಕನ್ನಡ ನಾಡು, ನುಡಿಗಳ ಮೇಲೆ ಕಾಳಜಿ ಇರುವ ಪ್ರತಿಯೊಬ್ಬರೂ ಈ ಸಂದರ್ಭ ಧ್ವನಿ ಎತ್ತರಿಸಿ ಚಿಕ್ಕಮಗಳೂರು ಸಾಹಿತ್ಯ ಪರಿಷತ್ ಹಾಗೂ ಕಲ್ಕುಳಿ ವಿಠಲ ಹೆಗ್ಗಡೆಯ ಜೊತೆ ನಿಲ್ಲಬೇಕು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News