×
Ad

ರಾಯಿ: ರೈ ಹೆಸರಿರುವ ಶಿಲಾಕಲ್ಲು ಧ್ವಂಸ; ಕಾಂಗ್ರೆಸ್ ಖಂಡನೆ

Update: 2020-01-10 20:29 IST

ಬಂಟ್ವಾಳ, ಜ. 10: ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಗೆ 2017ರಲ್ಲಿ ಮಂಜೂರು ಮಾಡಿ ಅಭಿವೃದ್ಧಿಗೊಳಿಸಿದ್ದು, ಇಲ್ಲಿ ಹಾಕಲಾಗಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೆಸರಿರುವ ಶಿಲಾ ಕಲ್ಲನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಗೆ 2017ರಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು 10 ಲಕ್ಷ ರೂ. ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಮಾಡಿರುವ ಶಿಲಾ ಕಲ್ಲನ್ನು ಅಳವಡಿಸಲಾ ಗಿತ್ತು. ಈ ಶಿಲಾಕಲ್ಲನ್ನು ಕಿಡಿಗೇಡಿಗಳು ಧ್ವಂಸಗೊಳಿಸುವ ಮೂಲಕ ಮತ್ತೊಮ್ಮೆ ವಿಕೃತಿ ಮೆರೆದಿದ್ದಾರೆ.

2ನೇ ಘಟನೆ

ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಕೃತಜ್ಞತೆ ಸಲ್ಲಿಸಿ ಹಾಕಿದ್ದ ಬ್ಯಾನರ್‍ವೊಂದನ್ನು ಕೂಡಾ ಕಿಡಿಗೇಡಿಗಳ ತಂಡ ಡಿ. 26ರಂದು ಹಾನಿಗೊಳಿಸಿತ್ತು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಖಂಡನೆ

ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸದ ವಿರೋಧಿಗಳು ಕೈ ಮೈ ಪರಚುತ್ತಲೇ ಇದ್ದು, ರಾಯಿ ಪ್ರದೇಶದ ಶಿಲಾಕಲ್ಲು ಧ್ವಂಸ ಇದರ ಮುಂದುವರಿದ ಭಾಗವಾಗಿದೆ. ವಿಕೃತ ಮನಸ್ಸಿನ ಕಿಡಿಗೇಡಿ ಕೃತ್ಯವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.

ರೈಗಳ ಅಭಿವೃದ್ಧಿ ಕಾರ್ಯಗಳನ್ನು ಜನಮಾನಸದಿಂದ ಇಲ್ಲವಾಗಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ವಿರೋಧಿಗಳು ಇದೀಗ ಅಭಿವೃದ್ಧಿ ಕಾರ್ಯದ ಕುರುಹುಗಳನ್ನು ಧ್ವಂಸ ಮಾಡುವ ವಿಕೃತ ಮನಸ್ಥಿತಿಗೆ ಬಂದಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ರೈಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯ ಸುವರ್ಣ ಯುಗವನ್ನು ಒಪ್ಪಿಕೊಳ್ಳಬೇಕೇ ಹೊರತು ಅಲ್ಲಗಳೆಯಲು ಯಾವ ವಿರೋಧಿ ಯಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ರಾಯಿಯಲ್ಲಿ ನಡೆಸಿರುವ ಕೃತ್ಯ ಇಲ್ಲಿನ ಗಿರಿಜನ ಸಮುದಾಯಕ್ಕೆ ಹಾಗೂ ಈ ಭಾಗದ ಸಾರ್ವಜನಿಕರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿರುವ ಬೇಬಿ ಕುಂದರ್ ಘಟನೆ ಅತ್ಯಂತ ಖಂಡನೀಯ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News