ನಂದಾವರ: ಮಸೀದಿ ಖತೀಬ್, ಅಧ್ಯಕ್ಷ ಸಹಿತ 7 ಮಂದಿಯ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ : ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ನಂದಾವರ ಮಸೀದಿಯ ಖತೀಬ್, ಅಧ್ಯಕ್ಷ ಹಾಗೂ ಗ್ರಾಪಂ ಅಧ್ಯಕ್ಷ ಸಹಿತ ಏಳು ಮಂದಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರಕರಣ ದಾಖಲಾಗಿದೆ.
ನಂದಾವರ ಜುಮಾ ಮಸೀದಿ ಅಧ್ಯಕ್ಷ ಬಶೀರ್, ಮಸೀದಿಯ ಖತೀಬ್ ಅಬ್ದುಲ್ ಮಜೀದ್ ದಾರಿಮಿ, ಸಜೀಪಮುನ್ನೂರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ, ಮಸೀದಿ ಮಾಜಿ ಅಧ್ಯಕ್ಷ ಮಜೀದ್, ಆರಿಫ್ ನಂದಾವರ, ಮುಸ್ತಾಫ, ಅಬೂಬಕರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಜೀಪಮುನ್ನೂರು ಗ್ರಾಮದ ನಂದಾವರ ಜುಮಾ ಮಸೀದಿಯ ಬಳಿ ಶುಕ್ರವಾರ ಮಧ್ಯಾಹ್ನ ಅನುಮತಿ ಪಡೆಯದೆ ಇತರರು ಸೇರಿಕೊಂಡು ಸಾರ್ವಜನಿಕರಿಗೆ ಮತ್ತು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆ ನೀಡುವಂತೆ ಪ್ರತಿಭಟನೆ ಮಾಡಿರುವ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.