×
Ad

ಜೆಎನ್‌ಯು ಹಿಂಸಾಚಾರದ ವೇಳೆ ಬೀದಿ ದೀಪ ಆರಿಸಿದ್ದ ಪೊಲೀಸರು: indiatoday.in ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ

Update: 2020-01-10 21:57 IST
ಫೈಲ್ ಚಿತ್ರ

ಹೊಸದಿಲ್ಲಿ,ಜ.10: ರವಿವಾರ ಸಂಜೆ ಜೆಎನ್‌ಯು ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ತನ್ನ ಪಾತ್ರವಿರುವುದನ್ನು ತನ್ನನ್ನು ಎಬಿವಿಪಿ ಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಅಕ್ಷತ್ ಅವಸ್ತಿ, ‘ಇಂಡಿಯಾ ಟುಡೇ’ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ವಿವಿ ಕ್ಯಾಂಪಸ್‌ನಲ್ಲಿ ಮುಸುಕುಧಾರಿ ದುಷ್ಕರ್ಮಿಗಳ ಗುಂಪು ಹಿಂಸಾಚಾರದಲ್ಲಿ ತೊಡಗಿದಾಗ ಪೊಲೀಸರು ವಿದ್ಯುತ್‌ ದೀಪಗಳನ್ನು ಆರಿಸಿದ್ದಾರೆಂಬ ಸ್ಫೋಟಕ ವಿಷಯವನ್ನು ಕೂಡಾ ಆತ ಬಹಿರಂಗಪಡಿಸಿದ್ದಾನೆ.

ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳನ್ನು ಥಳಿಸುವಂತೆಯೂ ಮುಸುಕುಧಾರಿ ಗೂಂಡಾಗಳಿಗೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹುರಿದುಂಬಿಸಿದ್ದರೆಂದು ಅಕ್ಷತ್ ಅವಸ್ತಿ ತಿಳಿಸಿದ್ದಾನೆ. ಜನವರಿ 5ರಂದು ಜೆಎನ್‌ಯು ಕ್ಯಾಂಪಸ್‌ನ ಒಳಗೆ ಹಾಗೂ ಹೊರಗೆ, ದಾಳಿಗಾಗಿ ಜನರ ಗುಂಪನ್ನು ತಾನು ಜಮಾವಣೆಗೊಳಿಸಿದ್ದನ್ನೂ ಆತ ಒಪ್ಪಿಕೊಂಡಿದ್ದಾನೆ.

 ಜೆಎನ್‌ಯುನ ಫ್ರೆಂಚ್ ಪದವಿ ತರಗತಿಯ ಮೊದಲ ವರ್ಷದ ವಿದ್ಯಾರ್ಥಿಯಾದ ಅಕ್ಷತ್ ಅವಸ್ತಿಯು ಎಬಿಬಿವಿಯ ಸಕ್ರಿಯ ಕಾರ್ಯಕರ್ತ ಎನ್ನಲಾಗಿದೆ.

 ರವಿವಾರ ಮಧ್ಯಾಹ್ನ ಪೆರಿಯಾರ್ ಹಾಸ್ಟೆಲ್‌ನಲ್ಲಿ ನಡೆದ ಹಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾಗ ತಾನು ಪೊಲೀಸರಿಗೆ ಕರೆ ಮಾಡಿದ್ದೆ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಗಾಯಾಳು ವಿದ್ಯಾರ್ಥಿಯೊಂದಿಗೆ, ಹಲ್ಲೆ ನಡೆಸಿದವರಿಗೆ ಥಳಿಸುವಂತೆ ಪ್ರಚೋದನೆ ನೀಡಿದ್ದರೆಂದು ಅವಸ್ತಿ ಬಹಿರಂಗಡಿಸಿದ್ದಾನೆ.

ಅವಸ್ತಿ ಹಾಗೂ ‘ಇಂಡಿಯಾಟುಡೆ’ ವರದಿಗಾರನ ನಡುವೆ ನಡೆದ ಸಂಭಾಷಣೆಯ ತುಣುಕನ್ನು ಇಲ್ಲಿ ನೀಡಲಾಗಿದೆ.

ವರದಿಗಾರ: ಬೀದಿ ದೀಪಗಳನ್ನು ಯಾರು ಆರಿಸಿದ್ದರು?ನೀವೇನಾ?

ಅಕ್ಷತ್ ಅವಸ್ತಿ: ಪೊಲೀಸರೆಂದು ನಾನು ಭಾವಿಸುತ್ತೇನೆ.

 ವರದಿಗಾರ: ಪೊಲೀಸರು ಹಾಗೆ ಯಾಕೆ ಮಾಡಿದರು?

ಅಕ್ಷತ್ ಅವಸ್ತಿ: ಗುಂಪು ಜಮಾವಣೆಗೊಳ್ಳುವುದು ಯಾರಿಗೂ ಕಾಣಸಿಗುವುದು ಅವರಿಗೆ ಬೇಕಾಗಿರಲಿಲ್ಲ.

ವರದಿಗಾರ: ಹಾಗಾದರೆ, ಪೊಲೀಸರು ನಿಮಗೆ, ಎಬಿವಿಪಿಗೆ ನೆರವಾಗಿದ್ದರೇ?

 ಅಕ್ಷತ್ ಅವಸ್ತಿ: ಇಷ್ಟಕ್ಕೂ ಅದು ಯಾರದ್ದು ಪೊಲೀಸ್ ಸರ್?.

 ರವಿವಾರ ಸಂಜೆ ಮುಸುಕುಧಾರಿ ಗೂಂಡಾಗಳು ಜೆಎನ್‌ಯು ಆವರಣದಲ್ಲಿ ದಾಳಿ ನಡೆಸಿದಾಗ ಕ್ಯಾಂಪಸ್‌ನ ಹೊರಭಾಗದಲ್ಲಿರುವ ಬೀದಿದೀಪಗಳನ್ನು ಆರಿಸಲಾಗಿತ್ತೆಂದು ಹಲವಾರು ವಿದ್ಯಾರ್ಥಿಗಳು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News