ಇಂಟರ್‌ನೆಟ್ ನಿರ್ಬಂಧ ಮರುಪರಿಶೀಲನೆ: ಸು.ಕೋರ್ಟ್ ಶಿಫಾರಸಿಗೆ ಜಮ್ಮುಕಾಶ್ಮೀರದಲ್ಲಿ ವ್ಯಾಪಕ ಸ್ವಾಗತ

Update: 2020-01-10 16:48 GMT

ಶ್ರೀನಗರ,ಜ.10: ಜಮ್ಮುಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆಗೆ ವಿಧಿಸಿರುವ ನಿರ್ಬಂಧಗಳನ್ನು ಪುನರ್‌ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಜಮ್ಮುಕಾಶ್ಮೀರ ಆಡಳಿತಕ್ಕೆ ಆದೇಶ ನೀಡಿರುವುದನ್ನು ಕಾಶ್ಮೀರದ ಜನತೆ ಶುಕ್ರವಾರ ಸ್ವಾಗತಿಸಿದೆ.

ಸುಪ್ರೀಂಕೋರ್ಟ್‌ನ ಆದೇಶ ಹೊರಬೀಳುತ್ತಿದ್ದಂತೆಯೇ, ಜಮ್ಮುಕಾಶ್ಮೀರದ ನಾಗರಿಕರು, ತಮ್ಮ ಮೊಬೈಲ್‌ಪೋನ್‌ಗಳಲ್ಲಿ, ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಇಂಟರ್‌ನೆಟ್ ಸಂಪರ್ಕ ಯಾವಾಗ ಮತ್ತೆ ಲಭ್ಯವಾಗುವುದೆಂದು ಅಧಿಕಾರಿಗಳ ಜೊತೆ ವಿಚಾರಿಸತೊಡಗಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

   ‘‘ಜಮ್ಮುಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆ ನಿಷೇಧವು ಆರನೆ ತಿಂಗಳಿಗೆ ಕಾಲಿರಿಸಿದೆ. ಇಂದಿನ ಯುಗದಲ್ಲಿ ಇಂಟರ್‌ನೆಟ್ ಇಲ್ಲದೆ ಪ್ರವಾಸೋದ್ಯಮ ಸೇರಿದಂತೆ .ಯಾವುದೇ ವಲಯದಲ್ಲೂ ಉದ್ಯಮವನ್ನು ನಡೆಸುವುದು ಅಸಾಧ್ಯವಾಗಿದೆ. ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ, ಇಂಟರ್‌ನೆಟ್ ಸಂಪರ್ಕ ಮರುಸ್ಥಾಪನೆಗೆ ಕೇಂದ್ರ ಸರಕಾರವು ತಡ ಮಾಡಲಾರದು ಎಂದು ನಾವು ಭಾವಿಸಿದ್ದೇವೆ’’ ಎಂದು ಕಾಶ್ಮೀರ ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ ಶೇಖ್ ಆಶೀಕ್ ತಿಳಿಸಿದ್ದಾರೆ.

2019ರ ಆಗಸ್ಟ್ 5ರಂದು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ಇಂಟರ್‌ನೆಟ್ ಸಂಪರ್ಕಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದಾಗ್ಯೂ ತೀರಾ ಇತ್ತೀಚೆಗೆ 80 ಕಚೇರಿಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಸರಕಾರವು ಮರುಸ್ಥಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News