×
Ad

ಗ್ರಾಮಚಾವಡಿ : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2020-01-10 22:31 IST

ಕೊಣಾಜೆ: ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಈ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ನೂರಾರು ವಿವಿಯ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಮುಸ್ಲಿಂ ಮಾತ್ರ ಅಲ್ಲ ಬಹುಸಂಖ್ಯಾತ ಹಿಂದೂಗಳು‌ ಕೂಡಾ‌ ಎನ್ ಅರ್ ಸಿ ವಿರುದ್ಧ ಬೀದಿಗಿಳಿದಿದ್ದಾರೆ. ಆದರೆ ಸಂಘ ಪರಿವಾರದ ಕನಸಿನಂತೆ ಸೌಹಾರ್ದದ ಭಾರತವನ್ನು  ಎಂದಿಗೂ ಹಿಂದೂ ರಾಷ್ಟ್ರ ವನ್ನಾಗಿ ಮಾಡಲು ಬಿಡೆವು ಎಂದು ಡಿವೈಎಫ್ ಐ ಮುಖಂಡ ಸುನೀಲ್ ಕುಮಾರ್ ಬಜಾಲ್  ಹೇಳಿದರು.

ಅವರು ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಕೊಣಾಜೆ ಸಮೀಪದ  ಗ್ರಾಮಚಾವಡಿಯಲ್ಲಿ ಮುಸ್ಲಿಂ ಜಮಾಅತ್ ಒಕ್ಕೂಟದಿಂದ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಮೊನ್ನೆ ನಡೆದ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆಗೆ ನೇರ ಪೊಲೀಸರೇ ಕಾರಣರಾಗಿದ್ಸಾರೆ. ಕರ್ನಾಟಕದ ಅಯೋಗ್ಯ ಸರಕಾರದ ನಾಲಾಯಕ್ ಮುಖ್ಯಮಂತ್ರಿ ಯಾರ್ಯಾದ್ದೋ‌ ಮಾತು ಕೇಳಿ  ಗಲಭೆಯಲ್ಲಿ ಮೃತಪಟ್ಟವರಿಗೆ ಘೋಷಿಸಿದ ಪರಿಹಾರವನ್ನೂ ವಾಪಸ್ಸು ಪಡೆದಿರುವುದು‌ ನಾಚಿಕೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ, ಇದು ಯಾವುದೇ ಪಕ್ಷ, ಧರ್ಮದ ವಿರುದ್ದದ ಹೋರಾಟವಲ್ಲ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಸಂವಿಧಾನದ ರಕ್ಷಣೆಗಾಗಿ ಆರಂಭವಾದ ಹೋರಾಟ ಎಂದು ಹೇಳಿದರು.

ಮೂಡಬಿದಿರೆ ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷ ಹುಸೈನ್ ಅಹ್ಸನಿ ಮುಈನ್ , ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು. ಫರೀದ್ ನಗರ ರಿಫಾಯಿ ಜುಮಾ ಮಸೀದಿಯ ಮುದರ್ರಿಸ್ ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೋಸಿ ಹರೇಕಳ ಸಭೆ ಉದ್ಘಾಟಿಸಿದರು.‌

ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ಅಧ್ಯಕ್ಷ ಅಹ್ಮದ್ ನಯೀಂ ಫೈಝಿ ಮುಕ್ವೆ , ಮುಸ್ಲಿಂ ಒಕ್ಕೂಟದ ಸಂಚಾಲಕ ಅಬ್ದುಲ್ ರಝಾಕ್, ಸಂಚಾಲಕ ಎಸ್.ಎಂ.ಆಸಿಫ್ ಇಕ್ಬಾಲ್ ಮಲಾರ್, ಮುಖಂಡ ಜಲೀಲ್‌ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಒಕ್ಕೂಟದ ಸದಸ್ಯ ಝಾಹೀದ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಸ್ತಫಾ ಮಲಾರ್ ವಂದಿಸಿದರು. ಇರ್ಫಾನ್ ಮೌಲವಿ ಹಾಗೂ ಹಾರಿಸ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News