×
Ad

ಮದ್ಯವ್ಯಸನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ: ಡಾ.ಭಂಡಾರಿ

Update: 2020-01-10 22:38 IST

ಉಡುಪಿ, ಜ.10: ಮದ್ಯವ್ಯಸನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ. ಈ ದಿಶೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರವು ಮದ್ಯವ್ಯಸನಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಒಂದು ಅವಕಾಶ ನೀಡುತ್ತದೆ. ಕೇವಲ ಕುಡಿತ ಬಿಟ್ಟರೆ ಮಾತ್ರ ಸಾಲದು. ಅದರೊಂದಿಗೆ ಗುಟ್ಕಾ ಸೇವನೆಯಂತಹ ಇತರೆ ದುಶ್ಚಟಗಳನ್ನು ತ್ಯಜಿಸಬೇಕು. ಆಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಉಡುಪಿಯ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ, ನಾಡಿನ ಖ್ಯಾತ ಮನೋರೋಗ ತಜ್ಞರಲ್ಲಿ ಒಬ್ಬರಾದ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಮುಂಬೈಯ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ಉಡುಪಿ-ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಡಾ. ಕಮಲ ಎ. ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ಹತ್ತು ದಿನಗಳ ಕಾಲ ನಡೆದ 27ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್ ಮಾತನಾಡಿ, ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳಿಗೆ ಪರೋಕ್ಷವಾಗಿ ಮದ್ಯವ್ಯಸನ ಕಾರಣವಾಗಿರುತ್ತದೆ. ಶೇ.70ರಷ್ಟು ರಸ್ತೆ ಅಪಘಾತ ಗಳಿಗೆ ಮದ್ಯವ್ಯಸನ ಕಾರಣವಾಗಿದೆ. ಒಬ್ಬ ಮದ್ಯವ್ಯಸನಿ ತಂದೆಯಿಂದ ಆತನ ಮಕ್ಕಳು ಹಾಗೂ ಕುಟುಂಬ ಹಾಳಾಗುತ್ತದೆ. ಆರೋಗ್ಯ, ಶಿಕ್ಷಣ, ಕುಟುಂಬದ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತದ ಉಡುಪಿ ಎಎಸ್ಪಿಭಾಸ್ಕರ ವಿ.ಬಿ. ಮಾತನಾಡಿ, ಮದ್ಯವ್ಯಸನ ಬೆಳೆಸಿ ಕೊಂಡಿರುವ ವ್ಯಕ್ತಿ ಗಳಿಗೆ ಸಮಾಜ ಎಂದಿಗೂ ಗೌರವ ನೀಡುವುದಿಲ್ಲ. ಹೀಗಾಗಿ ದುಶ್ಚಟಗಳಿಂದ ಮುಕ್ತರಾಗಿ ಕುಟುಂಬದವರ ಜತೆಗೆ ಬೆರೆತು, ಅವರ ವಿಶ್ವಾಸ ಗಳಿಸುವ ಮೂಲಕ ಸಮಾಜದಲ್ಲಿ ಸಭ್ಯ ವ್ಯಕ್ತಿಗಳಾಗಿ ಬಾಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಉಡುಪಿ- ಕರಾವಳಿಯ ಕಾರ್ಯದರ್ಶಿ ಡಾ.ಪ್ರಕಾಶ್ ಭಟ್ ಮಾತನಾಡಿ, ಮದ್ಯವ್ಯಸನ ಎನ್ನುವುದು ಆರ್ಥಿಕ, ಕೌಟುಂಬಿಕ ಹಾಗೂ ಸಾಂಸ್ಕೃತಿಕ ದಿವಾಳಿತನವನ್ನು ಸೃಷ್ಟಿಸುತ್ತದೆ ಎಂದರು. ಉದ್ಯಮಿ ರವೀಂದ್ರ ಹೆಗ್ಡೆ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ನ  ಟ್ರಸ್ಟಿ ಸಿರಾಜ್ ಅಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ಯೋಗೀಶ್ ಶೇಟ್ ಹಾಗೂ ಜನಾದನರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಆಪ್ತ ಸಮಾಲೋಚಕರಾದ ಮುಜಾಮಿಲ್ ಅಹ್ಮದ್ ಶಿಬಿರದ ವರದಿ ಮಂಡಿಸಿದರು. ಕೆ. ಲೋಹಿತ್ ಅತಿಥಿಗಳನ್ನು ಪರಿಚಯಿಸಿದರೆ, ಪದ್ಮಾ ವಂದಿಸಿದರು. ಪಾವನ ಮತ್ತು ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News