ಗುರುಪುರ: ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Update: 2020-01-10 17:24 GMT

ಕೈಕಂಬ : ಎನ್‍ಆರ್‍ಸಿ, ಸಿಎಎ ಮತ್ತು ಎನ್‍ಪಿಆರ್ ಕಾಯ್ದೆ ವಿರುದ್ಧ `ಸಂವಿಧಾನ ಸಂರಕ್ಷಣಾ ವೇದಿಕೆ'ಯು ಶುಕ್ರವಾರ ಗುರುಪುರ ಕೈಕಂಬದ ಆದರ್ಶನಗರದ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿತು.

ಸಭೆಯನ್ನುದ್ದೇಶಿಸಿ ಬಜರಂಗ ದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್ ಮಾತನಾಡಿ, ಈ ದೇಶದಲ್ಲಿ ರಾಷ್ಟ್ರೀಯತೆ, ದೇಶಭಕ್ತಿ ವ್ಯಾಪಾರೀಕರಣವಾಗುತ್ತಿದೆ ಎಂಬುದು ಅರ್ಥವಾಗುತ್ತಲೇ ನಾನು ಹಿಂದೂ ಸಂಘಟನೆಯಿಂದ ಹೊರ ಬಂದಿದ್ದೇನೆ. ಅದು ಮುಸ್ಲಿಮರ, ಕಾಶ್ಮೀರ, ಪಾಕಿಸ್ತಾನದ ವಿರುದ್ಧ ಟೀಕೆ ಕಾರುವ ಸಭೆಯಾಗಿತ್ತು. ಇಲ್ಲಿ ಪರ ಧರ್ಮೀಯರ ಬಗ್ಗೆ ಪ್ರೀತಿ, ಸಹನೆ, ಸೌಹಾರ್ದತೆ ಇಲ್ಲದ ಹಿಂದೂತ್ವ ಪ್ರದರ್ಶನವಾಗುತ್ತಿದ್ದು, ಮುಸ್ಲಿಮರ ಒಡೆದು ದೇಶ ಕಟ್ಟುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಈ ಕಾಯ್ದೆಗಳಾಗಿವೆ ಎಂದರು.

ಪತ್ರಕರ್ತ ಶಶಿಧರ್ ಭಟ್, ಮಾಜಿ ಸಚಿವ ರಮಾನಾಥ ರೈ, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಪತ್ರಕರ್ತ ರಾ. ಚಿಂತನ್, ಎ ಕೆ ಅಶ್ರಫ್ ಜೋಕಟ್ಟೆ, ಅಲ್ಪೋನ್ಸ್ ಫ್ರ್ಯಾಂಕೋ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ವಸಂತ ಆಚಾರ್, ಮೌಲಾನಾ ಅಬ್ದುಲ್ ರಶೀದ್ ಝೈನಿ, ಮೌಲಾನಾ ತಾರಿಕ್ ಅನ್ವರ್ ಸಲಫಿ ಮತ್ತಿತರರು ಮಾತನಾಡಿ ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ಕಾಯ್ದೆಗಳ ಮೂಲಕ ದೇಶ ಒಡೆದು ಆಳಲು ನಡೆಸುವ ಕೇಂದ್ರದ ಹುನ್ನಾರ ಅಡಗಿದೆ. ಇದರ ಪರಿಣಾಮ ಇಂದು ಮುಸ್ಲಿಮರು, ನಾಳೆ ಹಿಂದೂಗಳು ಪ್ರತಿಭಟನೆ ನಡೆಸಬೇಕಾಗುತ್ತದೆ. ಆದ್ದರಿಂದ ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಆರಂಭ ಎಂದರು. ಸಭೆಯಲ್ಲಿ ಕೇಂದ್ರ ಸರ್ಕಾರ, ಆರೆಸ್ಸೆಸ್, ಬ್ರಾಹ್ಮಣೀಕರಣ, ಮಂಗಳೂರು ಗೋಲಿಬಾರ್ ವಿರುದ್ಧ ಘೋಷಣೆಗಳು ಮೊಳಗಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News